ಬೆಂಗಳೂರು: ಹಲವಾರು ದಿನಗಳಿಂದ ಸರ್ಕಾರಿ ನೌಕರರು ನಿರೀಕ್ಷಿಸುತ್ತಿದ್ದ 7ನೇ ವೇತನ ಆಯೋಗ ಕೊನೆಗೂ ರಚನೆಯಾಗಿದೆ. ರಾಜ್ಯ ಸರ್ಕಾರಿ ನೌಕರರ ವೇತನ - ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರನ್ನು 7ನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.
ಪ್ರತಿ ಐದು ವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸಲಾಗುತ್ತದೆ. ಆಯೋಗವು ಬೆಲೆ ಏರಿಕೆ, ಇತರ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ, ಕೇಂದ್ರದ ಕ್ರಮಗಳನ್ನು ಪರಿಶೀಲಿಸಿ ವೇತನ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ. ಐದು ವರ್ಷ ಕೆಳಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಹೋಗುವ ಮುನ್ನ ಆಯೋಗ ರಚಿಸಿ ವರದಿಯನ್ನು ಅನುಷ್ಠಾನಗೊಳಿಸುವ ತೀರ್ಮಾನ ಪ್ರಕಟಿಸಿದ್ದರು. ಇದೀಗ ಬಸವರಾಜ ಬೊಮ್ಮಾಯಿ ವೇತನ ಆಯೋಗ ರಚನೆ ಮಾಡಿದ್ದಾರೆ.
ವೇತನ ಆಯೋಗದ ಐದು ವರ್ಷಗಳ ಅವಧಿ ಜುಲೈ 31ಕ್ಕೆ ಕೊನೆಯಾಗಿದೆ. ಹೀಗಾಗಿ ಹೊಸ ವೇತನ ಆಯೋಗದ ರಚನೆ ಮತ್ತು ಅನುಷ್ಠಾನವನ್ನು ಸರ್ಕಾರಿ ನೌಕರರು ಕಾಯುತ್ತಿದ್ದರು. ಮೂರು ತಿಂಗಳಿನಿಂದಲೇ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸಿತ್ತು. ಸದ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿರುವ ಬೇಡಿಕೆ ಒಪ್ಪಿದರೆ ಸರ್ಕಾರದ ಬೊಕ್ಕಸದ ಮೇಲೆ ಮಾಸಿಕ 1 ಸಾವಿರ ಕೋಟಿಯಂತೆ ವರ್ಷಕ್ಕೆ 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.
ನುಡಿದಂತೆ ನಡೆದು ನಿಗದಿತ ಅವಧಿಯಲ್ಲಿ ವೇತನ ಆಯೋಗ ರಚನೆ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಎಸ್.ಬೊಮ್ಮಾಯಿರವರಿಗೆ ರಾಜ್ಯದ 6 ಲಕ್ಷ ಸರ್ಕಾರಿ ಅಧಿಕಾರಿ/ನೌಕರರರು, 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯ ಸಿಬ್ಬಂದಿಗಳು ಹಾಗೂ 4 ಲಕ್ಷ ನಿವೃತ್ತ ನೌಕರರ ಪರವಾಗಿ ಸರ್ಕಾರಿ ನೌಕರರ ಸಂಘವು ಧನ್ಯವಾದ ತಿಳಿಸಿದೆ.
ಸಂಘದ ಬೇಡಿಕೆ ಏನು?: ಹಾಲಿ ಪಡೆಯುತ್ತಿರುವ ಡಿಎ ವನ್ನು ಮೂಲವೇತನದೊಂದಿಗೆ ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಮತ್ತು ಮೂಲ ವೇತನದ ಮೇಲೆ ಶೇ.30ರಿಂದ 40ರಷ್ಟು ವೇತನ ಹೆಚ್ಚಳ ಆಗಬೇಕು. 2022ರ ಜುಲೈ 1 ರಿಂದ ಅನ್ವಯವಾಗುವಂತೆ ಪರಿಷ್ಕರಣೆಯಾಗಬೇಕು. 2023ರ ಜನವರಿಯಿಂದ ಆರ್ಥಿಕ ಅನುಕೂಲ ಆಗಬೇಕು ಎಂಬುದು ಸರ್ಕಾರಿ ನೌಕರರ ಸಂಘದ ಆಗ್ರಹವಾಗಿದೆ.
ಈ ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ವಿಶೇಷ ಭತ್ಯೆ ಪರಿಷ್ಕರಣೆ ಮಾಡಬೇಕು. ವಿವಿಧ ಇಲಾಖಾ ವೃಂದಗಳ ವೇತನ ಶ್ರೇಣಿಯಲ್ಲಿನ ತಾರತಮ್ಯ ಸರಿಪಡಿಸಬೇಕು. 2.5 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡಬೇಕು. ಕಳೆದ ಆಯೋಗದ ಅವಧಿ ಮುಗಿದಲ್ಲಿಂದಲೇ ಕಾಲ್ಪನಿಕ ವೇತನ ಸೌಲಭ್ಯ ಕಲ್ಪಿಸಬೇಕು.
ವೇತನ ಆಯೋಗದಿಂದ ನಿರೀಕ್ಷೆಗಳೇನು?: ಹಾಲಿ ಇರುವ ಮೂಲ ವೇತನಕ್ಕೆ ತುಟ್ಟಿಭತ್ಯೆಯನ್ನು ವಿಲೀನಗೊಳಿಸಿದ ನಂತರ ನಿಗದಿಯಾಗುವ ಮೂಲವೇತನಕ್ಕೆ ಶೇ.40 ಫಿಟ್‌ಮೆಂಟ್ ಸೌಲಭ್ಯವನ್ನು ಪಡೆಯುವುದು. 2022 ಜುಲೈ 1 ರಿಂದ ಕಾಲ್ಪನಿಕವಾಗಿ ವೇತನ ಸೌಲಭ್ಯಗಳನ್ನು ಹಾಗೂ 2023 ಜನವರಿ 1 ರಿಂದ ಆರ್ಥಿಕ ಸೌಲಭ್ಯವನ್ನು ಪಡೆಯುವುದು. ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ವಿಶೇಷ ಭತ್ಯೆಗಳ ಪರಿಷ್ಕರಣೆ ಮಾಡುವುದು. ವಿವಿಧ ಇಲಾಖಾ ವೃಂದಗಳ ವೇತನ ಶ್ರೇಣಿಯಲ್ಲಿನ ತಾರತಮ್ಯಗಳನ್ನು ಸರಿಪಡಿಸುವುದು.
ವೇತನ ಆಯೋಗದ ಜವಾಬ್ದಾರಿಗಳು:ಆಡಳಿತಾತ್ಮಕ ವಿಷಯಗಳ ಸುಧಾರಣೆ, ಖಾಲಿಯಿರುವ ಹುದ್ದೆಗಳ ಭರ್ತಿ, ನೇಮಕಾತಿ ಮತ್ತು ಮುಂಬಡ್ತಿ ನಿಯಮಗಳ ಸರಳೀಕರಣಕ್ಕೆ ಶಿಫಾರಸು, ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ಶಿಫಾರಸು, ಅನವಶ್ಯಕ ವೆಚ್ಚಗಳಿಗೆ ಕಡಿವಾಣ, ಸರ್ಕಾರಿ ಕಚೇರಿಗಳಲ್ಲಿ ಮೂಲ ಸೌಲಭ್ಯಗಳು ಹಾಗೂ ಮಹಿಳಾ ನೌಕರರ ಸಮಸ್ಯೆಗಳ ಸುಧಾರಣೆ, ಸರ್ಕಾರಿ ನೌಕರರಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು ಪೂರಕವಾದ ಯೋಜನೆಗಳು. ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಗುಣಮಟ್ಟದ ಸೇವೆ ನೀಡಲು ನಿಯಮಾವಳಿಗಳ ಸರಳೀಕರಣ ಮಾಡಬೇಕು ಎಂಬುದು ನೌಕರರ ಒತ್ತಾಯವಾಗಿದೆ.
ಹಿಂದಿನ ವೇತನ ಸಮಿತಿ/ಆಯೋಗಗಳು ಎಷ್ಟು?: 1956 ರಿಂದ ಕಾಲಕಾಲಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪರಿಷ್ಕರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ 5 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುವ ಸಂಪ್ರದಾಯವನ್ನು ಹೊಂದಿದೆ. 1986 ರಿಂದ ಈವರೆಗೆ 11 ವೇತನ ಆಯೋಗ/ಸಮಿತಿಗಳು ರಚನೆಯಾಗಿವೆ.
ಈ ಹಿಂದಿನ ವೇತನ ಆಯೋಗಗಳು ನಿಗದಿತ ಅವದಿಯಲ್ಲಿ ರಚನೆಯಾಗಿರಲಿಲ್ಲ. ಆದರೆ ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರವು ಸಂಘದ ಮನವಿಯನ್ನು ಪುರಸ್ಕರಿಸಿ ನಿಗದಿತ ಐದು ವರ್ಷದ ಅವಧಿಯೊಳಗೆ ವೇತನ ಆಯೋಗವನ್ನು ನವೆಂಬರ್ 9 ರಂದು ರಚಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ವೆಚ್ಚದ ಲೆಕ್ಕಾಚಾರ ಏನು: ಪ್ರಸ್ತುತ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ವೃಂದಗಳ ಒಟ್ಟು ನೌಕರರ ಮೂಲ ವೇತನ-23,908 ಕೋಟಿ ರೂ., ಪ್ರಸ್ತುತ ತುಟ್ಟಿ ಭತ್ಯೆ ದರ ಶೇ.31ರ ಪ್ರಕಾರ- 7, 441.48 ಕೋಟಿ ರೂ., ಪ್ರಸ್ತುತ ಮೂಲ ವೇತನ ಹಾಗೂ ಶೇ.31ರ ತುಟ್ಟಿಭತ್ಯೆ ವಿಲೀನ ಸೇರಿ- 31,319 ಕೋಟಿ ರೂ., ವಿಲೀನದ ಬಳಿಕ ಶೇ.40 ಫಿಟ್‌ಮೆಂಟ್ ನೀಡಿದರೆ ಆಗುವ ಹೆಚ್ಚುವರಿ ವೆಚ್ಚ- 12,527.79 ಕೋಟಿ ರೂ. ಆಗಲಿದೆ.
ಯಾರಿಗೆಲ್ಲಾ ಅನುಕೂಲ: 5.40 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಸಿಬ್ಬಂದಿಗಳು ಹಾಗೂ 4 ಲಕ್ಷ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ:ಮೊದಲ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿರ್ಧಾರ 2025-26 ರಿಂದ ಜಾರಿ: ಶಿಕ್ಷಣ ಇಲಾಖೆ ಸ್ಪಷ್ಟನೆ