ಬೆಂಗಳೂರು: ಇಬ್ಬರು ನ್ಯಾಯಮೂರ್ತಿಗಳು ಹಾಗೂ ಕೆಲ ವಕೀಲರನ್ನು ಕೊಲ್ಲುವುದಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಪತ್ರ ಬರೆದಿದ್ದ ಜಯನಗರ ನಿವಾಸಿ ಎಸ್.ವಿ. ಶ್ರೀನಿವಾಸ್ ರಾವ್(72) ಬೇಷರತ್ ಕ್ಷಮೆ ಕೋರಿದ್ದಾರೆ.
ನ್ಯಾಯಮೂರ್ತಿಗಳನ್ನು ಕೊಲ್ಲುವ ಬೆದರಿಕೆ ಹಾಕಿದ 72ರ ವೃದ್ಧ: ಹೈಕೋರ್ಟ್ ಕ್ಷಮೆ ಕೇಳಿದ ರಾವ್
ನ್ಯಾಯಮೂರ್ತಿಗಳು ಹಾಗೂ ವಕೀಲರನ್ನು ಕೊಲ್ಲುವುದಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಪತ್ರ ಬರೆದಿದ್ದ ಜಯನಗರ ನಿವಾಸಿ ಎಸ್.ವಿ. ಶ್ರೀನಿವಾಸ್ ರಾವ್ ನ್ಯಾಯಾಲಯದ ಮುಂದೆ ಕ್ಷಮೆ ಕೋರಿ ಮುಂದೆ ಇಂತಹ ತಪ್ಪುಗಳು ಆಗದು ಎಂದು ಹೇಳಿದ್ದಾರೆ.
ರಾವ್ ಪತ್ರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ರಾವ್, ಅರ್ಜಿ ಸಂಬಂಧ ಬೇಷರತ್ ಕ್ಷಮೆ ಯಾಚಿಸುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀವು ಹಿಂದೆಯೂ ಇದೇ ರೀತಿ ಮಾಡಿದ್ದೀರಿ. ಮುಂದೆ ಈ ರೀತಿ ಮತ್ತೆ ನಡೆದುಕೊಳ್ಳುವುದಿಲ್ಲ ಎಂಬುದಕ್ಕೆ ಖಾತ್ರಿ ಏನು ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ರಾವ್ ತಾವು ಆಡಿದ ಮಾತಿಗೆ ಬದ್ದರಾಗಿರುವುದಾಗಿ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ನೀವು ಮೊದಲ ಬಾರಿ ಪತ್ರ ಬರೆದಿದ್ದಾಗಲೂ ಇದೇ ರೀತಿ ಕ್ಷಮೆ ಕೋರಿ ಮತ್ತೆ ಪತ್ರ ಬರೆದಿದ್ದೀರಿ. ಹೀಗಾಗಿ, ನಿಮ್ಮ ಕ್ಷಮಾಪಣೆ ಪ್ರಮಾಣಪತ್ರವನ್ನು ನ್ಯಾಯಾಲಯ ಸ್ವೀಕರಿಸಿದರೂ, ಪ್ರಕರಣವನ್ನು ರದ್ದು ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ನಡೆ ಗಮನಿಸಿ ಈ ಕುರಿತು ನಿರ್ಧರಿಸುತ್ತೇವೆ ಎಂದು ತಿಳಿಸಿ, ವಿಚಾರಣೆಯನ್ನು ಏ.22ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ, ಮಾ.9ರಂದು ರಾವ್ ಸಲ್ಲಿಸಿದ್ದ ಮೆಮೋ ವಿಚಾರಣೆ ನಡೆಸಿದ ಪೀಠ ಬೇಸರ ವ್ಯಕ್ತಪಡಿಸಿತು. ನಾಲ್ಕು ಮೆಮೋಗಳನ್ನು ಸಲ್ಲಿಸಿ, ಡಿಆರ್ಟಿ, ಡಿಆರ್ಎಟಿ ನ್ಯಾಯಾಧೀಶರು, ಹೈಕೋರ್ಟ್ನ 28 ಮತ್ತು ಸುಪ್ರೀಂ ಕೋರ್ಟ್ನ 16 ಮಂದಿ ನ್ಯಾಯಮೂರ್ತಿಗಳ ವಿರುದ್ಧ ಮತ್ತೆ ಆರೋಪ ಮಾಡಿದ್ದೀರಿ. ಈ ಹಿಂದೆ ಹೈಕೋರ್ಟ್ ನಿರ್ಧರಿಸಿರುವ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಲು 5, 7 ಅಥವಾ 9 ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠ ರಚಿಸುವಂತೆ ಕೋರಿದ್ದೀರಿ. ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ನಿಮ್ಮ ಮನವಿ ಪರಿಗಣಿಸಲು ಅಕಾಶವಿಲ್ಲ. ಆದರೆ ನೀವು ಭ್ರಷ್ಟಾಚಾರದಿಂದ ಹೊರತಾದ ಖಡಕ್ ನ್ಯಾಯಮೂರ್ತಿಗಳನ್ನು ಈ ಪೀಠದಲ್ಲಿ ನಿಯೋಜಿಸಲು ಕೋರಿದ್ದೀರಿ. ಮತ್ತದೇ ತಪ್ಪುಗಳನ್ನು ಎಸಗುತ್ತಿದ್ದೀರಿ ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ರಾವ್, ನಾನು ಹಾಗೆ ಬರೆದಿಲ್ಲ. ಒಂದು ವೇಳೆ ಹಾಗೆ ಬರೆದಿದ್ದು ಸರಿಯಿಲ್ಲದಿದ್ದರೆ ಮನ್ನಿಸಬೇಕು. ಆದರೆ, ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.