ಕರ್ನಾಟಕ

karnataka

ETV Bharat / state

ವಿಶೇಷ ಬರಹ: ಕೊರೊನಾ ತಡೆಗೆ 25 ಎಚ್ಚರಿಕೆ ಕ್ರಮ... ನಾವು ಒಂದಾಗಿ ಜೀವ, ಸಮಾಜ ಉಳಿಸೋಣ! - corona virus latest news

ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸಕಾ೯ರ ಸೂಚಿಸುವ ಎಲ್ಲ ರೀತಿಯ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸುವುದು, ಎಲ್ಲ ಸಭ್ಯ ಗೌರವಾನ್ವಿತ ನಾಗರೀಕರ ಕರ್ತವ್ಯವಾಗಿರುತ್ತದೆ. ಇಂಥ ಮಹಾ ಮಾರಿಯನ್ನು ನಿಯಂತ್ರಿಸಲು ಇಡೀ ದೇಶವೇ ಪಕ್ಷ ಭೇದ, ಜಾತಿ, ಮತ ಧರ್ಮಭೇದಗಳನ್ನು ಮರೆತು ಒಂದಾಗುವುದು. ಇದರಲ್ಲಿ ರಾಜಕೀಯ ತರುವುದು, ವಿರೋಧ ಮಾಡುವುದು, ಅಪಹಾಸ್ಯ ಮಾಡುವುದು ಬೇಡ. ಈ ಸಂದರ್ಭದಲ್ಲಿ ಎಲ್ಲರೂ ಖಡ್ಡಾಯವಾಗಿ ಮನೆಯಲ್ಲಿ ಈ ಕನಿಷ್ಠ 25 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ

25 points for Coronation Intervention... Let Us Save Lives and Society!
ಕೊರೊನಾ ತಡೆಗೆ 25 ಎಚ್ಚರಿಕೆ ಕ್ರಮ... ನಾವು ಒಂದಾಗಿ ಜೀವ, ಸಮಾಜ ಉಳಿಸೋಣ!

By

Published : Mar 24, 2020, 5:01 PM IST

ಕೊರೊನಾ ಸೋಂಕಿನ ಪ್ರಭಾವ, ಭಾರತದಲ್ಲಿ ಇದೀಗ 3ನೇ ಹಂತವನ್ನು ಪ್ರವೇಶಿಸಿದೆ. ಹೀಗೆ ಬಿಟ್ಟರೆ ಮತ್ತೊಂದು ಇಟಲಿ ಆದೀತು‌. ಈ ಸಂದರ್ಭದಲ್ಲಿ ಎಲ್ಲರೂ ಖಡ್ಡಾಯವಾಗಿ ಮನೆಯಲ್ಲಿ ಈ ಕನಿಷ್ಠ 25 ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾಗಿದೆ.

ಗುಂಪು, ಸಮಾಜ, ಸಮೂಹ, ಜನರಿಂದ, ಜನ ಸಂಪರ್ಕ ದಿಂದ ದೂರ ಉಳಿದು ಮನೆಯಲ್ಲಿ ಕೆಲವು ವಾರ ಇರುವುದು ಅತಿ ಮುಖ್ಯ. ಮೊದಲು ಕೊರೊನ ವಿರುದ್ದ ನಿತ್ಯ ಯುದ್ಧ ಸಾರುತ್ತಿರುವ, ಎಚ್ಚರಿಕೆ ಕೊಡುತ್ತಿರುವ, ಎಲ್ಲ ಟಿ.ವಿ ಗಳಿಗೂ ಹಾಗೂ ಯುದ್ದೋಪಾದಿಯಲ್ಲಿ ನಿಸ್ವಾರ್ಥವಾಗಿ ಸತತ ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಎಲ್ಲ ಡಾಕ್ಟರರುಗಳಿಗೂ, ನರ್ಸ್​​​, ಆಸ್ಪತ್ರೆಯ ಸಿಬಂದಿ ಹಾುಗೂ ಎಲ್ಲಾ ಆಸ್ಪತ್ರೆಗಳಿಗೂ ದೀರ್ಘ ನಮಸ್ಕಾರ, ಅತಿ ಪ್ರಶಂಸನೀಯ.

1. ನಾವು ತೆಗೆದುಕೊಳ್ಳುವ ಹಾಲಿನ ಪ್ಯಾಕೆಟ್​ಗಳನ್ನ ಮನೆಗೆ ತಂದ ಕೂಡಲೆ ಮೊದಲು ಸೋಪ್ ವಾಟರ್ ಅಥವಾ ಸ್ಯಾನಿಟೈಸರ್​​ನಿಂದ ತೊಳೆದು ಅನಂತರ ಬರಿ ನೀರಿನಿಂದ ಚೆನ್ನಾಗಿ ತೊಳೆಯಿರಿ‌. ಅನಂತರ ನಿಮ್ಮ ಕೈಯನ್ನು ಸೋಪ್ ನೀರಿನಿಂದ ಚೆನ್ನಾಗಿ ತೊಳೆಯಿರಿ. ಕೊರೊನಾ ವೈರಸ್ ಬರಿ ನೀರಿನಿಂದ ಹೋಗುವುದಿಲ್ಲ.

2. ಮನೆಗೆ ಪತ್ರಿಕೆಗಳನ್ನು ಪಡೆಯುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು. ಕೆಲವು ಪತ್ರಿಕೆಗಳು ರಾಸಾಯನಿಕ ಸ್ಪ್ರೇ ಹೊಡೆದು ಕಳುಹಿಸುತ್ತಾರೆ. ಆದರೆ, ವಿತರಿಸುವವರು ಮಾಸ್ಕ್, ಕೈ ಗ್ಲೌಸ್ ಹಾಕಿದ್ದರೆ ಪರವಾಗಿಲ್ಲ.

3. ಕೊರಿಯರ್, ಪೋಸ್ಟ್ ಮೂಲಕ ಪಡೆಯುವ ವಸ್ತುಗಳನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಲು ಕೊರಿಯರ್ ನೀಡುವ ವ್ಯಕ್ತಿಗೆ ಸೂಚಿಸಿ, 24 ಗಂಟೆಗಳ ನಂತರ ತೆರೆಯುವುದು ಉತ್ತಮ ಅಥವಾ ರಾಸಾಯನಿಕ ಸ್ಪ್ರೇ ಹೊಡೆದು ಉಪಯೋಗಿಸುವುದು‌. ಯಾವುದೇ ಪಾರ್ಸೆಲ್ ವಿತರಿಸುವವರು ಮಾಸ್ಕ, ಗ್ಲೌನ್ ಹಾಕಿದ್ದಾನಾ ನೋಡಿ.

4. ಮನೆ ಕೆಲಸದವರಿಗೆ ವೇತನ ಸಹಿತ ರಜೆ ನೀಡಿ ನಮ್ಮ ಕೆಲಸ ನಾವೇ ಮಾಡಿ ಕೊಳ್ಳುವುದು ಸೂಕ್ತ.

5. ಅನಿವಾರ್ಯ ಸಂದರ್ಭದಲ್ಲಿ ಮನೆ ಕೆಲಸದವರ ಸೇವೆ ಅವಶ್ಯವಿದ್ದಲ್ಲಿ ಅವರಿಗೆ ಸ್ವಚ್ಛತೆ ಮತ್ತು ಕರೋನ ಹರಡುವಿಕೆ ಬಗೆಗೆ ಮಾಹಿತಿ ನೀಡುವುದು. ಮುಖ್ಯ ಬಾಗಿಲನ್ನು ಮುಟ್ಟದೇ , ಕಾಲಿಂಗ್ ಬೆಲ್ ಉಪಯೋಗಿಸಲು ಸೂಚಿಸುವುದು. ಅವರಿಗೆ ನಿತ್ಯ ಮಾಸ್ಕ್ ನೀಡಿ, ಕಾರ್ಯನಿವ೯ಹಿಸಲು ಸೂಚಿಸುವುದು, ಮತ್ತು ಬಂದ ಕೂಡಲೇ ಮತ್ತು ಆಗಾಗ್ಗೆ ಸೋಪಿನಿಂದ ಕೈತೊಳೆದುಕೊಳ್ಳಲು ಸೂಚಿಸುವುದು. ಮನೆಯ ಇತರ ವಸ್ತುಗಳನ್ನು ಮುಟ್ಟದಂತೆ ಸೂಚಿಸಿ, ಅವರು ಸ್ಪರ್ಶಿಸಿರುವ ಕಾಲಿಂಗ್ ಬೆಲ್ ಸ್ವಿಚ್ ಬಾಗಿಲ ಚಿಲಕ, ಗೇಟಿನ ಚಿಲಕ, ಮತ್ತು ಕೈತೊಳೆಯದೇ ಮುಟ್ಟಿರುವ ಇತರ ಭಾಗಗಳನ್ನು ಸ್ವಚ್ಛ ಗೊಳಿಸಲು ಸೂಚಿಸುವುದು.

6. ನೀವು ಮನೆಗೆ ತಂದ ನಂತರ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಕೂಡಲೇ ಸೋಪ್ ನೀರಿನಿಂದ ಮೊದಲು ತೊಳೆದು ಅನಂತರ ನೀರಿನಿಂದ 2-3 ಬಾರಿ ತೊಳೆದು ಸಂಗ್ರಹಿಸುವುದು.

7. ರಿಮೋಟ್, ಫೋನ್ ಮತ್ತು ಕೀಬೋರ್ಡ್‌ಗಳು ನಮ್ಮ ಮನೆಯಲ್ಲಿ ಹೆಚ್ಚು ಕಲುಷಿತ ಅಂಶಗಳಾಗಿವೆ. ಶುಚಿಗೊಳಿಸುವ ದ್ರವವನ್ನು ಬಳಸಿ ದಿನಕ್ಕೆ ಒಮ್ಮೆಯಾದರೂ ಅವುಗಳನ್ನು ಸ್ವಚ್ಛಗೊಳಿಸುವುದು.

8. ಮನೆಯಲ್ಲಿ ಅಥವಾ ಕಚೇರಿಯಲ್ಲಿದ್ದಾಗ ಆಗಾಗ್ಗೆ ಪ್ರತಿ ಗಂಟೆಗೊಮ್ಮೆ ಸೋಪ್ ನೀರು ಸ್ಯಾನಿಟೈಸರ್​​​​​​ನಿಂದ ಕೈ ತೊಳೆಯುವುದು.

9. ಮನೆ ಬಿಟ್ಟು ಹೊರಗಿನ ಎಲ್ಲ ಪ್ರಯಾಣವನ್ನು ತಾತ್ಕಾಲಿಕವಾಗಿ ಮುಂದೂಡುವುದು. ಅನಿವಾರ್ಯ ಪ್ರಯಾಣದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟು ಉಪಯೋಗಿಸಬಾರದು. ಸ್ವಂತ ವಾಹನ ಅಥವಾ ಓಲಾ ಮತ್ತು ಉಬರ್ ಬಳಸಬಹುದು.

10. ಜಿಮ್‌ಗಳು, ಈಜುಕೊಳ ಮತ್ತು ಇತರ ವ್ಯಾಯಾಮ ಅಭ್ಯಾಸಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು. ಬೋಧನೆಗಳು, ನೃತ್ಯ / ಸಂಗೀತ ತರಗತಿಗಳು ಇತ್ಯಾದಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು.

11. ಕಚೇರಿ ಕೆಲಸಗಳನ್ನು ಮನೆಯಲ್ಲಿ ಮಾಡುವುದು ಅಥವಾ ರಜೆ ಪಡೆದು ಮನೆಯಲ್ಲಿರುವುದು.

12. ವಾಡಿಕೆಯ ವಾಕಿಂಗ್, ಪಾರ್ಕ್, ವ್ಯಾಯಾಮಕ್ಕೆ ಹೋಗುವುದನ್ನು ನಿಲ್ಲಿಸಿ ಮನೆಯಲ್ಲೇ ಮಾಡಿಕೊಳ್ಳುವುದು.

13. ಒಟ್ಟಿನಲ್ಲಿ ಹೇಳುವುದಾದರೆ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಾರದೇ ಇರುವುದು ಸೂಕ್ತ.

14. ನಾನು ಸದೃಢವಾಗಿದ್ದೇನೆ ಆರೋಗ್ಯವಾಗಿದ್ದೇನೆ ನಮ್ಮ ಊರಿನಲ್ಲಿ ಕೊರೊನಾ ಸೋಂಕಿತರು ಇಲ್ಲ, ಮನೆ ಇಂದ ಸ್ವಲ್ಪ ಸಮಯ ಹೊರಗೆ ಹೋಗಿ ಬಂದರೆ ಏನೂ ಆಗುವುದಿಲ್ಲ , ಎಂಬ ನಿರ್ಲಕ್ಷ್ಯ ಮನೋಭಾವ, ಉಡಾಫೆ ಸಲ್ಲದು.

15. ಮನೆಯಲ್ಲಿನ ಎಲ್ಲ ಸಭೆ ಸಮಾರಂಭಗಳನ್ನು ಮುಂದೂಡುವುದು ಸೂಕ್ತ. ಹಾಗೂ ಸ್ನೇಹಿತರುಗಳು ಮತ್ತು ಸಂಬಂಧಿಕರುಗಳ ಸಮಾರಂಭಗಳಿಗೆ, ಇತರ ಸಂಘ ಸಂಸ್ಥೆಗಳ ಸಭೆಗಳಿಗೆ ಭಾಗವಹಿಸದೇ ಇರುವುದು, ಒಟ್ಟು ಕೂಡು ಭಜನೆ, ಪ್ರಾರ್ಥನೆ ಕೂಡಾ ಅಪಾಯಕಾರಿ‌. ನಮ್ಮ ಕುಟುಂಬದವರಿಗೆ ಮತ್ತು ಇತರರಿಗೆ ಕೊರೋನ ಹರಡುವುದನ್ನು ತಡೆಗಟ್ಟಲು ಅನಿವಾರ್ಯ ಎಂದು ಭಾವಿಸುವುದು.

16. ಆದಷ್ಟು ಹೊರಗಿನ ಹೋಟೆಲ್​​​​ನ, ಬೀದಿಯ ತಿಂಡಿ ತಿನಿಸು ತಿನ್ನಬೇಡಿ. ನೀವು ಮನೆಯಲ್ಲಿ ಇರುವುದರಿಂದ ಸಾಕಷ್ಟು ಸಮಯ ವಿರುವುದರಿಂದ ಮನೆಯಲ್ಲೇ ನೀವೇ ಮಾಡಿ. ನೀವು ಏಕಾಂಗಿಯಾಗಿದ್ದರೆ ಅನಿವಾರ್ಯವಾಗಿ ಹೊರಗಿನ ,ಹೋಟೆಲ್ ತಿಂಡಿ ಮೇಲೆ ಅವಲಂಬಿತರಾಗಿದ್ದರೆ ಪಾರ್ಸೆಲ್​​​​​ ತರಿಸಿ.

17. ಊಟ, ತಿಂಡಿ, ಪದಾರ್ಥಗಳ ಮಾಡಲು ಬೇಕಾದ ದವಸ ಧಾನ್ಯ, ಆಹಾರ ಪದಾರ್ಥಗಳನ್ನು ಕನಿಷ್ಠ 3-4 ವಾರಗಳಿಗಾಗಿ ಹತ್ತಿರದ ದಿನಸಿ ಅಂಗಡಿ ಅಥವಾ ಆನ್​ಲೈನ್ ಸಪ್ಲೈಯರ್​​​ಗಳ ಮೂಲಕ ತರಿಸಿಟ್ಟುಕೊಳ್ಳಿ.

18. ಅತಿಥಿಗಳನ್ನು ಸ್ವಾಗತಿಸಬೇಡಿ. ಹಾಗೆ ನೀವು ಅತಿಥಿಯಾಗಿ ಹೋಗಬೇಡಿ. ಸಮಯ ಕಳೆಯಲು ಯಾವ ಬಂಧು, ನೆಂಟರು, ಮಿತ್ರಯ, ಸಹೋದ್ಯೋಗಿಗಳ ಮನೆಗೆ ಭೇಟಿಕೊಡುವುದು ಬೇಡ.

ನಿಮ್ಮ ಮನೆಗೆ ಯಾವುದೇ ಅತಿಥಿ, ಬಂಧುಗಳು, ಮಿತ್ರರು, ನೆಂಟರು ಬಂದರೆ ಹೊರಗೆ ಕೂರಿಸಿ 3 ಅಡಿ ಅಂತರದಲ್ಲಿ ನಿಂತು ಮಾತನಾಡಿಸಿ, ಯಾವುದೆ ಕಾಫಿ, ಪಾನೀಯ, ತಿಂಡಿ ಕೊಡದೆ, ಉಪಚರಿಸದೇ, ಅವರು ಮನೆ ಬಿಟ್ಟು ಹೊರಗೆ ಬಂದಿರುವುದೇ ತಪ್ಪು ಎಂದು ಎಚ್ಚರಸಿ ಬುದ್ಧಿ ಹೇಳಿ ಆದಷ್ಟು ಕೂಡಲೇ ಕಳಿಸಿ.

19. ಕರೆನ್ಸಿ ನೋಟುಗಳನ್ನು ಮುಟ್ಟಬೇಡಿ, ಯಾರಿಂದಲು ನೋಟು ಪಡೆಯಬೇಡಿ ಹಾಗೂ ಕೊಡಬೇಡಿ. ಎಲ್ಲವನ್ನು ಆನ್​​​ಲೈನ್ ಬ್ಯಾಂಕಿಂಗ್, ವಾಲೆಟ್, ಪೋನ್ ಬ್ಯಾಂಕಿಂಗ್, ಪೇಟಿಯಂ, ಇತ್ಯಾದಿ ಆನ್​​ಲೈನ್ ಮೂಲಕ ವ್ಯವಹಾರ ಮಾಡಿ.

20. ಒಂದು ನಿಮಿಷ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಏನೂ ಆಗುದಿಲ್ಲ. ದೇವರು ಕಾಪಾಡುತ್ತಾನೆ ಎಂದು ಹೊರಗೆ ಹೋಗಬೇಡಿ. ದೇವಸ್ಥಾನದ ಪ್ರಸಾದ ತಿನ್ನಬೇಡಿ. ಅಷ್ಟಿದ್ದರೆ ಮನೆಯಲ್ಲಿ ಪೂಜೆ ಮಾಡಿಕೊಳ್ಳಬಹುದು.

21. ಕೊರೊನಾಕ್ಕೆ ಇನ್ನು ಯಾವುದೇ ಲಸಿಕೆ, ಔಷಧ ಬಂದಿಲ್ಲ. ಮಲೇರಿಯಾ ಹೆಚ್​​​​ಐವಿಗಳ ಔಷಧ ಆಗುತ್ತದೆ ಎನ್ನುತ್ತಾರೆ. ಕೊರನ ವೈರಸ್ ಆಗಾಗ ಅದರ ಸ್ಟ್ರಕ್ಚರ್ ಬದಲಾಯಿಸುವುದರಿಂದ, ಅದರ ಪರಿಣಾಮ, ಆಕ್ರಮಣ ರೀತಿ, ಹಾನಿ, ಅದು ಸ್ವ ಉಂಟುಮಾಡಿಕೊಳ್ಳುವ ಔಷಧ ನಿರೋಧಕ ಶಕ್ತಿ ಇತ್ಯಾದಿಗಳಿಂದ ಅದಕ್ಕೆ ಕೂಡಲೆ ಸುಲಭವಾಗಿ ಔಷಧ ಕಂಡು ಹಿಡಿಯುವುದು ಕಷ್ಟ, ಅದಕ್ಕೆ ಸಾಕಷ್ಟು ಸಮಯಬೇಕು. ಪ್ರಯೋಗಬೇಕು. ಮುಂದೆ ಬಂದೇ ಬರುತ್ತದೆ. ಆದರೆ ಈ ಮಧ್ಯ ಕೆಲವರು ಕೆಟ್ಟ ರೀತಿಯಲ್ಲಿ ಮೋಸದಿಂದ ಹಣ ಗಳಿಸುವವರು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಲಸಿಕೆ ಬಂದಿದೆ, ಆಯುರ್ವೇದ, ಹೋಮಿಯೋಪತಿ, ಹರ್ಬಲ್, ನಾಟಿ, ಬೇರು ಸೊಪ್ಪು ಗೋಮೂತ್ರ, ತುಳಸಿ, ಬೆಳ್ಳುಳ್ಳಿ ಹೀಗೆ ಸುಳ್ಳು ಔಷಧಗಳನ್ನು ಹಾಗೂ ವಿವಧ ಪೂಜೆ, ಪ್ರಾರ್ಥನೆ, ಹರಕೆ, ಹೋಮ, ಜಪ ತಪ, ಎಂದು ದೇವರು, ಭೂತ, ಪ್ರೇತ ಇತ್ಯಾದಿ ಮೈ ಮೇಲೆ ಬಂದು ದರ್ಶನದಿಂದ ಗುಣವಾಗುತ್ತದೆ ಎಂದು, ದಾರಿತಪ್ಪಿಸುವವರು, ಭವಿಷ್ಯ ಹೇಳುವವರು, ಜ್ಯೋತಿಷ್ಯದಿಂದ ಪರಿಹಾರವಿದೆ, ತಾನು ಮಹಾ ಜ್ಯೋತಿಷಿ ಮೊದಲೆ ಭವಿಷ್ಯ ಹೇಳಿದ್ದೇನೆಂದು ಮೋಸ ಮಾಡುವವರ ಬಲೆಗೆ ಬೀಳಬೇಡಿ.

22. ಮಾಸ್ಕ್​​​​ ಹಾಗೂ ಕೈ ಗ್ಲೌಸ್ ಮುಖ್ಯವಾಗಿ ಹೊರಗೆ ಹೋಗುವಾಗ ಕಡ್ಡಾಯವಾಗಿ ಹಾಕಿಕೊಳ್ಳಲೇ ಬೇಕು. ಬೇರೆ ಯಾವುದೇ ವಸ್ತುಗಳನ್ನು ಮುಟ್ಟುವ ಮೊದಲು ಕೈ ಗ್ಲೌಸ ಹಾಕಿಕೊಳ್ಳುವುದು ಕೂಡಾ ಅತಿ ಮುಖ್ಯ. ನಿಮಗೆ ಯಾವುದೇ ತರದ ಕೆಮ್ಮಿದ್ದರೆ ಮಾಸ್ಕ್ ಹಾಕಿಕೊಳ್ಳಲೇ ಬೇಕು.

23. ಮೂಢನಂಬಿಕೆ, ಮೌಢ್ಯಾಚಾರ, ಧಾರ್ಮಿಕ ವ್ಯಕ್ತಿಗಳ ಮಾತನ್ನು ನಂಬಬೇಡಿ ಯಾವ ಧರ್ಮಾಚಾರದಿಂದ, ದೇವರಿಂದ, ದೇವ ಮಾನವರಿಂದ, ಭೂತ ಪ್ರೇತ, ಆಚಾರ್ಯ, ಗುರುಗಳಿಂದ, ಜ್ಯೋತಿಷಿಗಳಿಂದ ತಡೆಯಲು ಸಾಧ್ಯವಿಲ್ಲ. ನಿಮಗೆ ದೇವರ ನಂಬಿಕೆ ಭಕ್ತಿ ಇದ್ದರೆ ಎಲ್ಲ ಕಡೆ ದೇವರಿದ್ದಾನೆ ಎಂದು ನಂಬಿಕೆ ನಿಮಗಿದ್ದರೆ ಮನೆಯಲ್ಲೇ ಕುಳಿತು ಧ್ಯಾನಮಾಡಿ. ಹಾನಿ ಇಲ್ಲ. ಆದರೆ, ವಿಜ್ಞಾನದಿಂದ ಮಾತ್ರ ಈ ರೋಗದ ನಿಯಂತ್ರಣ ಸಾಧ್ಯ ಎಂಬ ನಂಬಿಕೆ ಬೆಳೆಸಿ. ಸತ್ಯ ಒಪ್ಪಿರಿ. ಭ್ರಮೆ ಬಿಡಿ. ಈ ಮಾಹಾಮಾರಿಯ ತಡೆಯಲು ಅಂತರ ಕಾಯುವುದೊಂದೇ ದಾರಿ. 1) ಕೇವಲ ಸ್ವಯಂ ಪ್ರೇರಿತ ಮುಂಜಾಗ್ರತೆಯಿಂದ, 2) ಜನರಿಂದ ಅಂತರ ಕಾದು ದೂರವಿರುವುದರಿಂದ, 3) ರೋಗ ನಿಯಂತ್ರಣದ ವರೆಗೆ ಮನೆಯಲ್ಲೆ ಕುಳಿತುಕೊಳ್ಳುವುದರಿಂದ 4) ನಿಸ್ವಾರ್ಥ ಡಾಕ್ಟರ್​ಗಳ ಸೇವೆಯಿಂದ, 5) ಆಸ್ಪತ್ರೆಗಳ ಮಹಾ ಮಾನವೀಯ ಸೇವೆಯಿಂದ- ಈ ಪಂಚ ಮಾರ್ಗದಿಂದ ಮಾತ್ರ ಸಾಧ್ಯ. ಇಲ್ಲಿ ಆಸ್ಪತ್ರೆಗಳೇ ದೇವಸ್ಥಾನ ಹಾಗೂ ನಿಸ್ವಾರ್ಥ ಡಾಕ್ಟರ್​​​ಗಳೇ ದೇವರುಗಳು.

24. ಈಗ ಹೆಚ್ಚು ಆಸ್ಪತ್ರೆಗಳು ಡಾಕ್ಟರರು ಬೇಕು. ಈ ರೋಗ ವ್ಯಾಪಕವಾಗಿ ಪಸರಿಸಿದರೆ ನಮ್ಮ ದೇಶದಲ್ಲಿ ಆಸ್ಪತ್ರೆಗಳು ಸಾಕಾಗುವುದಿಲ್ಲ. ಹಾಗಾಗಿ ಸಿಕ್ಕಸಿಕ್ಕಿಲ್ಲಿ ಮೋರಿ ಮೇಲೆ ಕೊಳಚೆಯಲ್ಲಿ, ರಸ್ತೆ ಬದಿಯಲ್ಲಿ, ಪಾರ್ಕಿನಲ್ಲಿ, ದೇವಸ್ಥಾನ ಚರ್ಚು ಮಸೀದಿ ಕಟ್ಟಿಸುವ ಬದಲು ದೇವ ಭಕ್ತರು, ದೇಶ ಭಕ್ತರು ಎಲ್ಲರೂ ಒಟ್ಟು ಕೂಡಿ ಅಲ್ಲಲ್ಲಿ ಆಸ್ಪತ್ರೆಗಳನ್ನು ಕಟ್ಟಿಸಿ. ದೇವಸ್ಥಾನ ದೇವಕಾರ್ಯಕ್ಕಿಂತ ಇದು ದೊಡ್ಡ ಕಾರ್ಯ, ಈ ಕಾರ್ಯದಲ್ಲಿ ಇನ್ನೂ ಹೆಚ್ಚು ಪುಣ್ಯ ಸಿಗುತ್ತದೆ. ಮೊದಲು ಎಲ್ಲ ಮರೆತು ನಾವೆಲ್ಲ ಒಂದಾಗಿ ಈ ಕೆಲಸ ಮಾಡೋಣ.

25. ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೂಚಿಸುವ ಎಲ್ಲಾ ರೀತಿಯ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸುವುದು, ಎಲ್ಲಾ ಸಭ್ಯ ಗೌರವಾನ್ವಿತ ನಾಗರೀಕರ ಕರ್ತವ್ಯವಾಗಿರುತ್ತದೆ. ಇಂಥ ಮಹಾ ಮಾರಿಯನ್ನು ನಿಯಂತ್ರಿಸಲು ಇಡೀ ದೇಶವೇ ಪಕ್ಷ ಭೇದ, ಜಾತಿ, ಮತ ಧರ್ಮಭೇದಗಳನ್ನು ಮರೆತು ಒಂದಾಗುವುದು. ಇದರಲ್ಲಿ ರಾಜಕೀಯ ತರುವುದು, ವಿರೋಧ ಮಾಡುವುದು, ಅಪಹಾಸ್ಯ ಮಾಡುವುದು ಬೇಡ. ಮರಣ ಎದುರು ಬಂದು ನಿಂತಿದೆ ಮೊದಲು ಅದನ್ನು ಓಡಿಸಲು ಸಾಮೂಹಿಕವಾಗಿ ಇಡಿ ದೇಶವೇ ಒಂದಾಗಿ ನಾಶಮಾಡುವ. ಹಲವು ಮೂಲದಿಂದ ವಿಷಯ ತಿಳಿದು ಬರೆದಿದ್ದೇನೆ.

ಲೇಖಕರು: ಪ್ರೊ. ಎ.ಎಸ್. ನಟರಾಜ್

ABOUT THE AUTHOR

...view details