ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನ 24ನೇ ಘಟಿಕೋತ್ಸವ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಿತು. ಈ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಹರ್ಷವರ್ಧನ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಪಿ.ಸಿ. ಮೋಹನ್ ಹಾಜರಿದ್ದರು.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನ್ಯೂರೋ ಸೈಕಾಲಜಿ, ಕ್ಲಿನಿಕಲ್ ಸೈಕಾಲಜಿ, ನ್ಯೂರೋ ಫಿಜಿಯಾಲಜಿ, ನ್ಯೂರಾಲಜಿ ರಿಹಾಬಿಟೇಷನ್, ನ್ಯೂರಾಲಜಿ ನರ್ಸಿಂಗ್, ಸೈಕಿಯಾಟ್ರಿಕ್ ಸೋಶಿಯಲ್ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಪದವಿ ಪ್ರದಾನ ಮಾಡಿದ ನಂತರ ಮಾತನಾಡಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್, ಕ್ರೇಂದ್ರೀಯ ಪರೀಕ್ಷೆಗಳಿಗೆ ಸಿಎಂ ಬಿಎಸ್‌ವೈ ಜಾಗ ನೀಡುವಂತೆ ಕೋರಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ 50 ಎಕರೆ ಜಾಗ ನೀಡಲಿ ಹಾಗೂ ಇದಕ್ಕೆ ಬೇಕಾಗುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.
ನಿಮ್ಹಾನ್ಸ್ನ 24ನೇ ಘಟಿಕೋತ್ಸವ ಸಮಾರಂಭ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪದವಿ ಸ್ವೀಕರಿಸುತ್ತಿರುವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಅಭಿನಂದನೆ ಸಲ್ಲಿಸಿದರು. ಪದವಿ ಪಡೆದ ನೀವು ದೇಶದ ಆಸ್ತಿಗಳು. ರೋಗಿಯ ನೋವನ್ನು ನಿವಾರಿಸುವ ಶಕ್ತಿ ನಿಮಗಿದೆ. ಹೆಲ್ತ್ ಮಿಷನ್ನಡಿ ನಿಮ್ಹಾನ್ಸ್ ಹಲವು ಮಹತ್ವದ ಕಾರ್ಯಗಳನ್ನು ಮಾಡಿದೆ. ಮೊದಲ ಬಾರಿಗೆ ಮಕ್ಕಳ, ಶಿಶುಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ವಿಶಿಷ್ಟ ಕಾರ್ಯಕ್ರಮ ರೂಪಿಸಿದೆ ಎಂದರು.
ಸಿಎಂ ಬಿಎಸ್‌ವೈ ಹಾಡಿಹೊಗಳಿದ ಸಚಿವ ಡಾ. ಹರ್ಷವರ್ಧನ್:
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಮೊದಲು ಯಡಿಯೂರಪ್ಪ ಅವರೇ ಕಾರಣ. ದಕ್ಷಿಣ ಭಾರತದಲ್ಲಿ ನಮ್ಮ ಬಿಜೆಪಿಯ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಅವರು ಮುಖ್ಯಮಂತ್ರಿ ಆದ ಬಳಿಕ ದೆಹಲಿಗೆ ಆಗಮಿಸಿದ್ದರು. ಆಗ 10 ಸಾವಿರ ಜನ ಅವರ ಸ್ವಾಗತಕ್ಕಾಗಿ ದೆಹಲಿಯಲ್ಲಿ ಸೇರಿದ್ದರು. ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಂಡಿದ್ದೆ. ಅವರ ನಾಯಕತ್ವದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಅಂತ ಮುಖ್ಯಮಂತ್ರಿ ಬಿಎಸ್‌ವೈ ಅವರನ್ನ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹಾಡಿ ಹೊಗಳಿದರು.