ಬೆಂಗಳೂರು:ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಜಿಂಕೆ ಕೊಂಬು, ಆನೆ ದಂತ, ಮಾಂಸ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ವೈಯಾಲಿ ಕಾವಲ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರಶೇಖರ್, ರಂಗಸ್ವಾಮಿ, ಲೋಕೇಶ್, ಶೇಖರ್ ಹಾಗೂ ರೈಮಂಡ್ ಬಂಧಿತ ಆರೋಪಿಗಳು. ವೈಯಾಲಿ ಕಾವಲ್ 18ನೇ ಕ್ರಾಸ್ ಹಾಗೂ ಗುಟ್ಟಹಳ್ಳಿ ಸರ್ಕಲ್ ಬಳಿ ದಂಧೆಯಲ್ಲಿ ತೊಡಗಿದ್ದಾಗ, ಖಚಿತ ಸುಳಿವಿನ ಮೇಲೆ ಆರೋಪಿಗಳನ್ನ ಬಂಧಿಸಲಾಗಿದೆ.
ಬಂಧಿತರಿಂದ ಎರಡು ತಲೆಯ ಎರಡು ಹಾವುಗಳು, 12 ಜಿಂಕೆ ಕೊಂಬು ಹಾಗೂ ಆನೆ ದಂತಗಳನ್ನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಬಹಿರಂಗಪಡಿಸದಂತೆ ಆದೇಶ:ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ವಶಪಡಿಸಿಕೊಳ್ಳುವ ವಸ್ತುಗಳ ಮೌಲ್ಯವನ್ನ ಬಹಿರಂಗಪಡಿಸದಂತೆ ಪೊಲೀಸ್ ಇಲಾಖೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ. ಕಳ್ಳ ದಾಸ್ತಾನು ಮಾಡಿರುವ, ಕಳ್ಳ ಸಾಗಾಣಿಕೆಯ ವಿರುದ್ಧ ಪೊಲೀಸರು ದಾಳಿ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣಗಳನ್ನ ದಾಖಲಿಸುವ ವೇಳೆ ವಶಪಡಿಸಿಕೊಂಡ ವಸ್ತುಗಳ ಮೌಲ್ಯವನ್ನ ಬಹಿರಂಗಪಡಿಸುವುದರಿಂದ ಕಳ್ಳಸಾಗಾಣಿಕೆದಾರರಿಗೆ ಅವುಗಳ ಮೌಲ್ಯ ತಿಳಿಯುತ್ತದೆ. ಇದರಿಂದ ಅತೀ ಹೆಚ್ಚು ಮೌಲ್ಯ ಇರುವ ವನ್ಯ ಜೀವಿಗಳ ಹತ್ಯೆ, ಕಳ್ಳತನ, ಸಾಗಾಣಿಕೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಆದ್ದರಿಂದ ಸಾರ್ವಜನಿಕ ಮೌಲ್ಯ ನಿಗದಿಪಡಿಸುವುದಾಗಲಿ, ಅದರ ಮಾರುಕಟ್ಟೆ ಮೌಲ್ಯ ನಮೂದಿಸಿ ಹೇಳಿಕೆ ನೀಡುವುದಾಗಲಿ ಮಾಡದಂತೆ ಆದೇಶದಲ್ಲಿ ಅಲೋಕ್ ಮೋಹನ್ ಅವರು ಸೂಚಿಸಿದ್ದಾರೆ.