ಬೆಂಗಳೂರು : ಕೊರೊನಾ ನಿಯಂತ್ರಣ ಹಾಗೂ ಲಾಕ್ಡೌನ್ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ರಾಜ್ಯದ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮುಂದಿನ 14 ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಕುರಿತು ಸಲಹೆ, ಸೂಚನೆ ನೀಡಿದ್ದಾರೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ರಾಜ್ಯದ ನಡೆ ಶ್ಲಾಘಿಸಿದ ಪಿಎಂ ನರೇಂದ್ರ ಮೋದಿ.. ಇಲ್ಲಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಸಂವಾದದ ನಂತರ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳಲ್ಲಿನ ಸೋಂಕಿನ ಹಾಗೂ ಲಾಕ್ಡೌನ್ ಮಾಹಿತಿ ಪಡೆದಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ಅಡೆತಡೆಯಾಗದಂತೆ ಸೂಕ್ತಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಲಾಕ್ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಇನ್ನೂ ವಲಸೆ ಕಾರ್ಮಿಕರನ್ನು ಪ್ರತ್ಯೇಕವಾಗಿರಿಸುವ ವ್ಯವಸ್ಥೆ ಕಲ್ಪಿಸಬೇಕು. ಆಹಾರ ಹಾಗೂ ವೈದ್ಯರ ಕೊರತೆ ಆಗದಂತೆ ಆಯುಷ್ ವೈದ್ಯರ ಬಳಕೆ ಮಾಡಬೇಕು. ಅವರಿಗೆ ಆನ್ಲೈನ್ ತರಬೇತಿ ನೀಡುವಂತೆ ಸೂಚಿಸಿದ್ದಾರೆ. ದೇಶದ ಬೆನ್ನೆಲುಬು ಕೃಷಿ ಚಟುವಟಿಕೆಗಳಿಗೆ ಲಾಕ್ಡೌನ್ ವಿನಾಯಿತಿ ನೀಡಲಾಗಿದೆ. ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಟಾವು ವೇಳೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಅವರ ಮಾರ್ಗಸೂಚಿಗಳು ಈಗಾಗಲೇ ಕೆಲವು ಅನುಷ್ಠಾನಗೊಳಿಸಿದೆ ಎಂದರು.
ದೇಶದಲ್ಲಿ 124 ಪಾಸಿಟಿವ್ ಕೇಸ್ :ಏಪ್ರಿಲ್ 14ರವರೆಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಟಾಸ್ಕ್ ಫೋರ್ಸ್ ರಚಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದ ಆದೇಶಗಳ ಪಾಲನೆಗೆ ಎಲ್ಲ ಧರ್ಮಗುರುಗಳ ಸಹಕಾರ ಕೋರುತ್ತಿದ್ದೇನೆ. ಯಾಕೆಂದರೆ, ದೇಶದಲ್ಲಿ 124 ಪಾಸಿಟಿವ್ ಕೇಸ್ ದಾಖಲಾಗಿದೆ ಎಂದರು. ಕೊರೊನಾ ಭಾದಿತ ದೇಶಗಳ ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ಇನ್ನೂ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ತೆರಳಿದವರಲ್ಲಿ 391 ಕಾರ್ಯಕರ್ತರನ್ನು ಗುರುತಿಸಿ, ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಈ ಪ್ರಕ್ರಿಯೆ ಹೀಗೆ ಮುಂದುವರೆಯಲಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಅವರನ್ನು ಇದ್ದ ಜಾಗದಲ್ಲಿಯೇ ಕ್ವಾರಂಟೈನ್ಗೆ ಸೂಚಿಸಲಾಗಿದೆ. ಬೇರೆ ಜಿಲ್ಲೆಗೂ ತೆರಳಿ ಅವರನ್ನು ಹುಡುಕುತ್ತಿದ್ದೇವೆ. ಪತ್ತೆಯಾದ ಕೂಡಲೇ ಅಲ್ಲೇ ಕ್ವಾರಂಟೈನ್ ಮಾಡಲಾಗುತ್ತದೆ. ಕೆಲವರು ಬೇರೆ ರಾಜ್ಯಕ್ಕೆ ಹೋಗಿರುವ ಮಾಹಿತಿ ಇದೆ. ಬೀದರ್ನಲ್ಲಿ 91ಜನರ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 11 ಪಾಸಿಟಿವ್, 80 ನೆಗಟಿವ್ ವರದಿ ಬಂದಿದೆ ಎಂದರು. ಇನ್ನು, ಆರೋಗ್ಯ ತಪಾಸಣೆಗೆ ಹೋಗಿದ್ದ ಆಶಾ ಕಾರ್ಯಕರ್ತೆಯ ಮೇಲೆ ನಡೆದಹಲ್ಲೆ ಖಂಡನೀಯ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಇದೆನ್ನೆಲ್ಲ ಮಾಡಲಾಗುತ್ತಿದೆ ಎಂದು ಸಿಎಂ ಮನವಿ ಮಾಡಿದರು.