ನೆಲಮಂಗಲ: ಪ್ರವಾಸಕ್ಕೆಂದು ಶ್ರೀಲಂಕಾಗೆ ತೆರಳಿದ್ದ ನೆಲಮಂಗಲದ 7 ಜೆಡಿಎಸ್ ಮುಖಂಡರು ಅಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದು, ಆ ಏಳು ಮೃತ ದೇಹಗಳನ್ನು ಸ್ವಗ್ರಾಮಕ್ಕೆ ತರಲಾಗಿದೆ. ನಿನ್ನೆ ರಾತ್ರಿ ನಾಲ್ಕು ಮೃತದೇಹ ಭಾರತಕ್ಕೆ ಬಂದಿದ್ದು, ಉಳಿದ ಮೂರು ಮೃತ ದೇಹಗಳು ಇಂದು ಮಧ್ಯಾಹ್ನ ನೆಲಮಂಗಲದ ಮೃತರ ಸ್ವಗ್ರಾಮಕ್ಕೆ ತಲುಪಿವೆ.
ಮಾರೇಗೌಡರ ಅಂತಿಮ ದರ್ಶನ ಪಡೆದ ನಟ ಗಣೇಶ್
ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲಾಯಿತು. ರಾಜಕೀಯ ಮುಂಡರು ಸೇರಿದಂತೆ ಸಿನಿಮಾ ನಟರು ಮೃತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ನೆಲಮಂಗಲ ಹಾರೋ ಕ್ಯಾತನಹಳ್ಳಿಯ ಪುಟ್ಟರಾಜು ಮೃತದೇಹ ಸಂಜೆ ಐದು ಗಂಟೆಗೆ ಸ್ವಗ್ರಾಮಕ್ಕೆ ಬಂದಾಗ ಮೃತರ ಕುಟುಂಬಗಳ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಮೃತ ಪುಟ್ಟರಾಜು ಅಂತ್ಯ ಸಂಸ್ಕಾರವನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸ್ವಂತ ಜಮೀನಿನಲ್ಲಿ ಮಾಡಲಾಯಿತು. ಇನ್ನು ಮಾಜಿ ಎಂಎಲ್ಸಿ ಇ.ಕೃಷ್ಣಪ್ಪ ಸೋದರ ಸಂಬಂಧಿ ಅಡಕಮಾರನಹಳ್ಳಿ ಮಾರೇಗೌಡರ ಮೃತದೇಹವು ಸಂಜೆ 4.30ಕ್ಕೆ ಸ್ವಗ್ರಾಮಕ್ಕೆ ಬಂದಿದ್ದು, ಒಕ್ಕಲಿಗರ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲಾಯಿತು. ಇದಕ್ಕೂ ಮುನ್ನ ನಟ ಗಣೇಶ್ ಮೃತ ಮಾರೇಗೌಡರ ಅಂತಿಮ ದರ್ಶನ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಣೇಶ್, ಚಿಕ್ಕ ವಯಸ್ಸಿನಿಂದಲೂ ನಾನು ಮಾರೇಗೌಡರು ಸ್ನೇಹಿತರು. ಇಬ್ಬರು ಒಟ್ಟಿಗೆ ಆಟ ಆಡಿಕೊಂಡು ಬೆಳೆದವರು. ಕ್ರಿಕೆಟ್ ಅಂದ್ರೆ ನಮ್ಮಿಬ್ಬರಿಗೂ ತುಂಬಾ ಇಷ್ಟ. ನನಗೆ ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟದಲ್ಲಿ ನಮ್ಮವರು ಸತ್ತಿದ್ದಾರೆ ಅಂದಾಗ ಆತಂಕ ಆಗಿತ್ತು. ನಂತರ ಮಾರೇಗೌಡರು ಸಾವು ಅಂದಾಗ ಮನಸ್ಸಿಗೆ ತುಂಬಾನೇ ನೋವು ಆಯ್ತು. ಈ ಸಮಯದಲ್ಲಿ ಏನು ಹೇಳಬೇಕು ಅಂತ ನನಗೆ ಗೊತ್ತಾಗುತ್ತಿಲ್ಲ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.