ನಾಲ್ವರು ಸಾವಿನ ಕುರಿತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ದೊಡ್ಡಬಳ್ಳಾಪುರ:ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ ನಾಲ್ವರು ಎಂದಿನಂತೆ ರಾತ್ರಿ ಮಲಗುತ್ತಿದ್ದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿ ಸಮೀಪ ಕಳೆದ ರಾತ್ರಿ ನಡೆದಿದೆ. ರಾತ್ರಿ ಸುರಿಯುತ್ತಿದ್ದ ಮಳೆಯಿಂದ ಚಳಿಯ ವಾತಾವರಣ ನಿರ್ಮಾಣವಾಗಿತ್ತು. ಕೊಠಡಿಯಲ್ಲಿ ಬೆಚ್ಚಗೆ ನಿದ್ರಿಸಲು ಬೆಂಕಿ ಹಚ್ಚಿ ಇದ್ದಿಲಿನ ಪೆಟ್ಟಿಗೆ ಇಟ್ಟಿದ್ದಾರೆ. ಪರಿಣಾಮ ದಟ್ಟ ಹೊಗೆ ಆವರಿಸಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಕೋಳಿಫಾರಂ ಮಾಲೀಕ ಬೆಳಗ್ಗೆ ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಅಲ್ಲಿಪುರ ಮೂಲದ ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ (16) ಮೃತರೆಂದು ಗುರುತಿಸಲಾಗಿದೆ.
ಕಾಲೇ ಸರೇರಾ ಕುಟುಂಬದ ಮುಖ್ಯಸ್ಥ. ಕಳೆದ 10 ದಿನಗಳ ಹಿಂದಷ್ಟೇ ಮೋಹನ್ ಎಂಬವರಿಗೆ ಸೇರಿದ ಕೋಳಿಫಾರಂನಲ್ಲಿ ಕೆಲಸಕ್ಕೆ ಸೇರಿದ್ದರು. ಕುಟುಂಬದ ನಾಲ್ವರು ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದು ಪಕ್ಕದಲ್ಲಿದ್ದ ಶೆಡ್ನಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಮಳೆಯಾಗಿದ್ದು ಚಳಿ ಜೊತೆಗೆ ಸೊಳ್ಳೆಗಳ ಕಾಟವೂ ಇತ್ತು. ಇದರಿಂದ ಬೆಚ್ಚಗಿರಲು ಮತ್ತು ಸೊಳ್ಳೆಕಾಟದಿಂದ ಸಂರಕ್ಷಿಸಿಕೊಳ್ಳಲು ಇದ್ದಿಲು ಪೆಟ್ಟಿಗೆ ಇಟ್ಟುಕೊಂಡು ಕೋಣೆಯ ಬಾಗಿಲು ಹಾಕಿ ಮಲಗಿರಬಹುದು. ಇದರಿಂದ ಉರಿಯುತ್ತಿದ್ದ ಇದ್ದಿಲಿನಿಂದ ಇಡೀ ಕೋಣೆ ತುಂಬ ಹೊಗೆ ಆವರಿಸಿ ಆಮ್ಲಜನಕದ ಕೊರತೆ ಮತ್ತು ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಸಾವು ಸಂಭವಿಸಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ, ಮಾತನಾಡಿ, "ನಾವು ಮಾಹಿತಿ ಪಡೆದು ಬಂದು ಮನೆ ಪರಿಶೀಲಿಸಿದಾಗ ಕೋಣೆಯೊಳಗೆ ಸ್ವಲ್ಪಮಟ್ಟದ ಹೊಗೆ ಇತ್ತು. ನಾಲ್ವರ ಸಾವಿಗೆ ನೈಜ ಕಾರಣ ತಿಳಿಯಲು ಎಫ್‌ಎಸ್‌ಎಲ್ ತಂಡವನ್ನು ಕರೆಯಲಾಗಿದೆ. ವರದಿಯ ಮೇಲೆ ಅಸಲಿ ಕಾರಣ ತಿಳಿದು ಬರಲಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಶಿರಸಿ: ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ