ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮತಾಂತರ ನಿಷೇದ ಕಾಯ್ದೆ ವಿರೋಧಿಸಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆದೇಶಿಸಿರುವ ಕ್ರೈಸ್ತ ಚರ್ಚುಗಳು ಮತ್ತು ಸಂಘ ಸಂಸ್ಥೆಗಳ ಗಣತಿಯ ಔಚಿತ್ಯವನ್ನು ಪ್ರಶ್ನಿಸಿ ದೊಡ್ಡಬಳ್ಳಾಪುರದ ಕ್ರೈಸ್ತ ಒಕ್ಕೂಟದ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಕೆ.ಶಿವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ವಿಚಾರವಾಗಿ ನಗರದ ಸಂತ ಪೇತ್ರರ ಚರ್ಚ್‌ನಲ್ಲಿ ಮಾತನಾಡಿದ ಫಾದರ್ ಅಂಟೋನಿ ಡಿಸೋಜ, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರ ಒಮ್ಮತದಿಂದ ವಿರೋಧಿಸುತ್ತಿದ್ದೇವೆ.
ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ಯಾವ ಧರ್ಮವನ್ನಾದರು ಆಯ್ಕೆ ಮಾಡಿಕೊಳ್ಳುವ,ಅದರ ಕಟ್ಟುಪಾಡುಗಳು ನಿಯಮಗಳನ್ನ ಆಚರಿಸುವ ಸ್ವತಂತ್ರ್ಯವನ್ನ ಸಂವಿಧಾನ ನೀಡಿದೆ.
ಇಂಥ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹ. ರಾಜ್ಯದಲ್ಲಿ ಚರ್ಚ್ಗಳು ಎಷ್ಟಿವೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇದ್ದರೂ ಈಗ ಮತ್ತೆ ಗಣತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮತಾಂತರ ಕಾಯ್ದೆ ಜಾರಿಯಾದರೆ ಯಾವುದೇ ಪ್ರಯೋಜನವಿರುವುದಿಲ್ಲ. ಬದಲಿಗೆ ಕೋಮುವಾದಿಗಳ ಕೈಗೆ ಸಿಕ್ಕಿ ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಸಾಧ್ಯವಾಗಬಹುದು. ಹೀಗಾಗಿ, ಕಾಯ್ದೆಯ ಜಾರಿಯ ಬಗ್ಗೆ ನಮ್ಮ ಕ್ರೈಸ್ತರಿಂದ ಸಂಪೂರ್ಣ ವಿರೋಧದವಿದೆ ಎಂದು ಅಭಿಪ್ರಾಯ ಪಟ್ಟರು.