ಬಾಗಲಕೋಟೆ :ನಗರದ ಆರ್ಯವೈಶ್ಯ ಸಮಾಜದ ವತಿಯಿಂದ 18ನೇ ವರ್ಷದ ವಾಸವಿ ದೀಕ್ಷೆ ನಿಮಿತ್ತ ಶ್ರೀ ವಾಸವಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
18ನೇ ವರ್ಷದ ವಾಸವಿ ದೀಕ್ಷೆ: ಶ್ರೀ ವಾಸವಿ ದೇವಿಗೆ ವಿಶೇಷ ಪೂಜೆ.. ಕೊರೊನಾ ಸೋಂಕು ಸಂಪೂರ್ಣ ನಾಶವಾಗಲಿ ಹಾಗೂ ದೇಶದ ಜನತೆಗೆ ಆರೋಗ್ಯ, ಆಯುಸ್ಸು ನೀಡಲಿ ಎಂದು ಪ್ರಾರ್ಥಿಸಿ ಶ್ರೀ ವಾಸವಿ ದೇವಿಗೆ ಸುಮಾರು ಮೂರು ಗಂಟೆಗಳ ಕಾಲ ಹೋಮ ಹವನ ನೆರವೇರಿಸಲಾಯಿತು.
ಗದಗ, ಹುಬ್ಬಳ್ಳಿ, ಧಾರವಾಡ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ ಮಹಿಳಾ ಹಾಗೂ ಪುರುಷ ದೀಕ್ಷೆಯನ್ನು ತೆಗೆದುಕೊಂಡಿರುವರಿಗೆ ಮೊದಲು ಇರುಮುಡಿ ಕಟ್ಟಿ ನಗರದಲ್ಲಿ ಮೆರವಣಿಗೆ ಮಾಡಲಾಯಿತು.
ಬಳಿಕ ಆರ್ಯವೈಶ್ಯ ಸಮಾಜದ ನಗರೇಶ್ವರ ದೇವಸ್ಥಾನದಲ್ಲಿ ಶ್ರೀ ವಾಸವಿ ದೇವಿ, ಗಣಪತಿ ಹಾಗೂ ನಾಗಪೂಜೆ ಮಾಡಲಾಯಿತು. ಶ್ರೀ ವಾಸವಿ ದೇವಿಗೆ ಪೂಜೆ, ಭಜನೆ, ಜಪ ಹಾಗೂ ಮಹಾ ಮಂಗಳಾರತಿ ಹಾಗೂ ಅಗ್ನಿ ಪ್ರವೇಶ ಮಾಡಿದ 102 ದಂಪತಿಗೆ ಹಾಗೂ ಅಗ್ನಿ ಪ್ರವೇಶ ಮಾಡಿಸಿದ 102 ಋಷಿಗಳ ಸ್ಮರಿಸಿ ಕಳೆದ 5 ದಿನಗಳಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ವರ್ಷಗಳ ಹಿಂದೆ ಪಾರ್ವತಿ ದೇವಿ ವಾಸವಿ ರೂಪದಲ್ಲಿ ಭೂ ಲೋಕಕ್ಕೆ ಆಗಮಿಸುತ್ತಾರೆ. ಆಗ ವಿಷ್ಣುವರ್ಧನ್ ಮಹಾರಾಜರು ದೇವಿಯ ರೂಪಕ್ಕೆ ಮರುಳಾಗಿ ಮದುವೆ ಮಾಡಿಕೊಳ್ಳಲು ಮುಂದಾಗಿರುತ್ತಾರೆ. ಆಗ ಶ್ರೀವಾಸವಿ ದೇವಿ ನಾನು ಮಾನವ ರೂಪದಲ್ಲಿ ಸಮಾಜ ಸುಧಾರಣೆಗೆ ಬಂದಿದ್ದು, ಲೌಖಿಕ ಜೀವನಕ್ಕೆ ಬಂದಿಲ್ಲ ಎಂದು ಹೇಳಿ ಅಗ್ನಿಗೆ ಆಹುತಿ ಆಗುತ್ತಾರೆ. ಇವರ ಜೊತೆಗೆ 102 ದಂಪತಿ, ಋಷಿ ಮುನಿಗಳು ಅಗ್ನಿಗೆ ಆಹುತಿ ಆಗಿರುತ್ತಾರೆ.
ಹಾಗಾಗಿ, ಪ್ರತಿ ವರ್ಷ ದೇವಿಯ ಪ್ರೀತಿಗೆ ಪಾತ್ರರಾಗುವ ಜೊತೆಗೆ ಲೋಕ ಕಲ್ಯಾಣ ಹಾಗೂ ಮಾರಕ ರೋಗ ರುಜಿನುಗಳು ಹೋಗಲಾಡಿಸಲು ಇಂದಿಗೂ ಇಂತಹ ಪೂಜೆ ನೆರವೇರಿಸಲಾಗುತ್ತಾ ಬರಲಾಗುತ್ತಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.