ಬಾಗಲಕೊಟೆ: ಮುಧೋಳ ತಾಲೂಕು ಪಂಚಾಯಿತಿ ಅಧಿಕಾರಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಒಂದು ಹೆಜ್ಜೆ ಮುಂದಿದ್ದು, ವಿಶೇಷ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಗಮನ ಸೆಳೆಯುತ್ತಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿಕೊಂಡು ಮುಧೋಳ ತಾಲೂಕಿನ ಮೆಟ್ಟಗುಡ್ಡ ಹಾಗೂ ಭೊಮ್ಮನಬುದ್ದಿ ಗ್ರಾಮದಲ್ಲಿ ವಿಶೇಷ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು.
ಮೊದಲು ಮಹಿಳಾ ಸಿಬ್ಬಂದಿ ಗ್ರಾಮದಲ್ಲಿರುವ ಎಲ್ಲಾ ಮನೆಗಳಿಗೆ ತೆರಳಿ ಮಹಿಳೆಯರನ್ನು ಆರತಿ ಮಾಡಿ, ಕುಂಕುಮ ಹಚ್ಚಿ ಮತದಾನ ಮಾಡಬೇಕು, ಮತದಾನ ನಮ್ಮ ಹಕ್ಕು ಎಂದು ಹೇಳುವ ಮೂಲಕ ಜಾಗೃತ ಮೂಡಿಸಿದರು. ನಂತರ ನಡೆದ ಸಮಾರಂಭದಲ್ಲಿ ಮತ ರಕ್ಷಾ ಬಂಧನ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡರು. ರಕ್ಷಾ ಬಂಧನದಲ್ಲಿ ಸಹೋದರಿಯರು ಸಹೋದರರಿಗೆ ಕಟ್ಟುವಂತೆ ಮತದಾನ ಮಾಡುವಂತೆ ಮತ ರಕ್ಷೆ ಕೈಗೆ ಕಟ್ಟಿಸುವ ಮೂಲಕ ಮತದಾನ ಜಾಗೃತ ಮೂಡಿಸಿದರು.