ಬಾಗಲಕೋಟೆ: ಹೆದ್ದಾರಿಯಿಂದ ಸುಮಾರು 250 ಮೀಟರ್ ದೂರದಲ್ಲಿ ಬಾರ್ ತೆರೆಯುವಂತೆ ಕೋರ್ಟ್ ಆದೇಶಿಸಿದೆ. ಆದರೆ ಈ ಕಾನೂನು ಉಲ್ಲಂಘಿಸಿ, ರಾಜಕೀಯ ಒತ್ತಡದಿಂದ ಕೇವಲ 100 ಮೀಟರ್ ಒಳಗೆ ಬಾರ್ ತೆರೆಯುವುದಕ್ಕೆ ಹುನ್ನಾರ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸುಮಾರು 20 ಸಾವಿರ ಜನಸಂಖ್ಯೆ ಇರುವ ಕಲಾದಗಿ ಗ್ರಾಮದಲ್ಲಿ ಈಗಾಗಲೇ ಮೂರು ಬಾರ್ ಇವೆ. ಈಗ ನಾಲ್ಕನೇ ಬಾರ್ ಮುಧೋಳ ಪಟ್ಟಣದಿಂದ ಈ ಸ್ಥಳಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಉಲ್ಲಂಘನೆ ಮಾಡಿ ಬಾರ್ ತೆರೆಯುವುದಕ್ಕೆ ಸಿದ್ಧತೆ ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪೂರ ಅವರ ಆಪ್ತರಿಗೆ ಸೇರಿದೆ ಎನ್ನಲಾಗ್ತಿರುವ ಬಾರ್ ಅಂಗಡಿ ಮುಧೋಳ ಪಟ್ಟಣದಿಂದ ಇಲ್ಲಿ ಸ್ಥಳಾಂತರ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ. ಬೆಳಗಾವಿ-ರಾಯಚೂರರು ಹೆದ್ದಾರಿಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಕಟ್ಟಡ ನಿರ್ಮಿಸಲಾಗಿದೆ.
ಇನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಅಂತಿಮ ಮುದ್ರೆ ಬಿದ್ದರೆ ಶೀಘ್ರದಲ್ಲೇ ಇಲ್ಲಿಯೇ ಮತ್ತೊಂದು ಬಾರ್ ತಲೆ ಎತ್ತಲಿದೆ. ಈ ಸ್ಥಳದ ಬಲಭಾಗದ ಕೂಗು ಅಳತೆಯಲ್ಲಿ ಸಾಯಿ ಮಂದಿರ ಇದ್ದು, ಎಡಭಾಗದ ಸ್ವಲ್ಪ ದೂರದಲ್ಲಿ ಶಾಲಾ- ಕಾಲೇಜ್ ಇವೆ. ಈಗಾಗಲೇ ಮೂರು ಬಾರ್ ಇರುವ ಈ ಚಿಕ್ಕ ಗ್ರಾಮದಲ್ಲಿ ಮತ್ತೊಂದು ಬಾರ್ ಆದಲ್ಲಿ, ತೋಟಗಾರಿಕೆ ಬೆಳೆಗೆ ಪ್ರಮುಖವಾಗಿರುವ ಕಲಾದಗಿ ಗ್ರಾಮದಲ್ಲಿ ದುಡಿದ ಹಣ, ಬಾರ್ಗೆ ಹಾಕುವಂತಾಗಿ ಇಡೀ ಕುಟುಂಬ ಬೀದಿ ಪಾಲಾಗಲಿದೆ ಎಂದು ಆಕ್ರೋಶ ಹೊರ ಬಂದಿದೆ.
ಗ್ರಾಮೀಣ ಭಾಗದಲ್ಲಿ ಬಾರ್ಗಳನ್ನು ತೆರೆವುಗೊಳಿಸುವಂತೆ ಮಹಿಳಾ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದರೂ, ಈಗ ಬಾರ್ ತೆರೆಯುತ್ತಿರುವದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಬಕಾರಿ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ, ಜಿಲ್ಲಾಡಳಿತ ಕಚೇರಿ ಎದುರು ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.