ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಇಂದಿರಾಗಾಂಧಿ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದರು. ಆದ್ರೆ ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದು ಅಧಿಕಾರಕ್ಕಾಗಿ ಸೋನಿಯಾ ಗಾಂಧಿ ಕಾಲಿಗೆ ಬೀಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಸಿಂದಗಿ ಉಪಚುನಾವಣೆ ಪ್ರಚಾರಕ್ಕೆ ಹೋಗುವ ಮಾರ್ಗಮಧ್ಯೆ ಬಾಗಲಕೋಟೆ ನಗರಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅತಿ ಹೆಚ್ಚು ಕೆಟ್ಟ ಶಬ್ದದಲ್ಲಿ ಇಂದಿರಾಗಾಂಧಿಗೆ ಬೈದಿದ್ದಾರೆ. ಇಂತವರು ಇದೀಗ ಕಾಂಗ್ರೆಸ್ ನಾಯಕ ಅಂತ ಹೇಳ್ತಾರೆ, ನಾಚಿಕೆ ಆಗಬೇಕು ಆವರಿಗೆ. ಅವರು ನಾನು ಹೀಗೆ ಮಾತನಾಡಿಲ್ಲ ಎನ್ನಲಿ, ನಮ್ಮ ಬಳಿ ದಾಖಲೆ ಇದೆ ಕೂಡುತ್ತೇವೆ ಎಂದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಿಂದೆ ವಾಜಪೇಯಿ ವಿಪಕ್ಷ ನಾಯಕರಾಗಿ ಇಂದಿರಾಗಾಂಧಿಗೆ ಬೆಂಬಲ ಕೊಟ್ಟಿದ್ದರು. ರಾಜೀವ್ ಮತ್ತು ಇಂದಿರಾ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದಾರೆ. ಆದರೆ ಈಗ ಅಧಿಕಾರಕ್ಕಾಗಿ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ತಾವು ಸಿಎಂ ಆಗಬೇಕು ಎನ್ನುವ ಹುಚ್ಚಿನಲ್ಲಿ ಅವರ ಕಾಲಿಗೆ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ಗೆ ಜಾತಿ ರಾಜಕಾರಣ ಬಿಟ್ಟರೆ ಉಪಚುನಾವಣೆಯಲ್ಲಿ ಬೇರೆ ಅಸ್ತ್ರವೇ ಇಲ್ಲ. ಕಾಂಗ್ರೆಸ್ನ ಬೌದ್ಧಿಕ ದಿವಾಳಿತನ, ವೈಚಾರಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ. ಗಾಂಧಿ ಕಟ್ಟಿದ ಕಾಂಗ್ರೆಸ್ ಪಕ್ಷ ಇಂದು ಹಳಿ ತಪ್ಪಿ ಹೋಗಿದೆ. ವೈಚಾರಿಕ, ಬೌದ್ಧಿಕ ವಿಚಾರದಿಂದ ಹೊರಬಂದು ಸಣ್ಣ ಮಟ್ಟದ ನೀಚ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ಇಳಿದಿದೆ ಎಂದು ಟಾಂಗ್ ನೀಡಿದರು.
ಸಿಂದಗಿ, ಹಾನಗಲ್ ಎರಡು ಉಪ ಚುಣಾವಣೆಯಲ್ಲಿ ಬಿಜೆಪಿಯ ಅಭಿವೃದ್ಧಿ, ಜನಪರ,ರಾಷ್ಟ್ರ ಪರ ವಿಚಾರಗಳಿಗೆ ಜನರು ಮನ್ನಣೆ ಕೊಡುತ್ತಾರೆ. ಉಪ ಚುನಾವಣೆಯ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಲಿದೆ. ಕಾಂಗ್ರೆಸ್ ಪಕ್ಷದ ಬಿ ಟೀಂ ಆಗಿ ಜೆಡಿಎಸ್ ಕೆಲಸ ಮಾಡುತ್ತಿದೆ. ಈ ಹಿಂದೆ ದೇವೇಗೌಡರು ಪ್ರಧಾನ ಮಂತ್ರಿಯಾಗಲು ಬೆಂಬಲ ನೀಡಿದವರು ಯಾರು?. ಬೆಂಗಳೂರು, ಮೈಸೂರು ಮಹಾನಗರ ಪಾಲಿಕೆಗೆ ಬೆಂಬಲ ನೀಡಿದವರು ಯಾರು?. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬೆಂಬಲಿಸಿದವರು ಯಾರು?. ಹೀಗಾಗಿ ಕಾಂಗ್ರೆಸ್ ಪಕ್ಷದ ಬಿ ಟೀಂ ಜೆಡಿಎಸ್ ಆಗಿದೆ ಎಂದರು.
ನಮ್ಮನ್ನ ಸಿಎಂ ಮಾಡಲಿಲ್ಲ ಅಂತಾ ಖರ್ಗೆ ಮತ್ತು ಪರಮೇಶ್ವರ್ ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರಿನಿಂದ ನಿಮ್ಮ ಪಾರ್ಟಿ ಸರ್ವನಾಶವಾಗಿ ಹೋಗುತ್ತದೆ. ಡಿಕೆಶಿಗೆ ಪರಮೇಶ್ವರ್, ಖರ್ಗೆ ಬಗ್ಗೆ ಚಿಂತೆಯಿಲ್ಲ. ಅವರಿಗೆ ಚಿಂತೆಯಿರೋದು ಸಿದ್ದರಾಮಯ್ಯನ ಬಗ್ಗೆ. ಈ ಉಪ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಎರಡು ಹೋಳಾಗುತ್ತದೆ. ಸಿದ್ದರಾಮಯ್ಯ ಡಿಕೆಶಿಯನ್ನ ಸಿಎಂ ಆಗಲಿಕ್ಕೆ ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದರು.