ಬಾಗಲಕೋಟೆ: ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧವಾಗಿರುವ ಜೊತೆಗೆ, ದೇವತೆಗಳ ಶಕ್ತಿ ಪೀಠದಲ್ಲಿ ಒಂದಾಗಿರುವ ಬಾದಾಮಿ ಬನಶಂಕರಿ ದೇವಾಲಯದಲ್ಲಿ ಕೊರೊನಾ ಭೀತಿಯಿಂದ ಭಕ್ತರ ಸಂಖ್ಯೆ ವಿರಳವಾಗಿದೆ. ಇದರಿಂದ ಅಧಿಕ ಮಾಸದ ನಿಮಿತ್ತ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರು ವಿರಳವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ಇಲ್ಲದೇ ಸಮಿತಿಯವರು ಸಂಕಷ್ಟ ಪಡುವಂತಾಗಿದೆ.
ಐತಿಹಾಸಿಕ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಬನಶಂಕರಿ ದೇವಿಗೆ ಅಧಿಕ ಮಾಸದಂದು ವಿಶೇಷ ಪೂಜೆ-ಪುನಸ್ಕಾರ ನೆರವೇರಿಸಲಾಗುತ್ತಿತ್ತು. ಆದರೆ, ಈ ಕೊರೊನಾ ಭೀತಿಯಿಂದ ಭಕ್ತರ ಸಂಖ್ಯೆ ವಿರಳವಾಗಿದ್ದು, ಕೇವಲ ಪೂಜೆ ಪುನಸ್ಕಾರ ಮಾಡಲಾಗುತ್ತಿದೆ. ಎಲ್ಲ ಬಗೆಯ ಪೂಜಾ ಸೇವೆಗಳು ಇವೆ. ಆದರೆ ಯಾವುದೇ ಸೇವೆಗೆ ದರ ಹೆಚ್ಚು ಮಾಡಿಲ್ಲ. ಈ ಹಿಂದೆ ಇದ್ದ ದರವೇ ಮುಂದುವರೆಸಲಾಗಿದೆ.
ಕೊರೊನಾಗೂ ಮುನ್ನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು. ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನದಲ್ಲಿ ಅನೇಕ ಭಕ್ತರು ಆಗಮಿಸಿದ್ದರು. ಆದರೆ ಈಗ ಕೊರೊನಾ ಭೀತಿ ಹಿನ್ನೆಲೆ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಈಗ ಶುಕ್ರವಾರ ಮತ್ತು ರವಿವಾರದಂದು ಮಾತ್ರ ಭಕ್ತರು ಹೆಚ್ಚಾಗಿ ಬರುತ್ತಿದ್ದು, ಉಳಿದ ದಿನದಲ್ಲಿ ಭಕ್ತರೇ ಇರುವುದಿಲ್ಲ.
ಸಾಮಾಜಿಕ ಅಂತರ ಕಾಯ್ದುಕೊಂಡು ದೇವಿಯ ಗರ್ಭಗುಡಿಯಲ್ಲಿ ಸೇವೆಗಳನ್ನು ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ, ಬಂದ ಭಕ್ತರಿಗೆ ಉಚಿತ ಪ್ರವಾಸ ಸೇವೆ ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷದ ಇದೇ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ವಿವಿಧ ಪೂಜಾ ಸೇವೆಗಳನ್ನು ಮಾಡಿಸಿ, ಲಕ್ಷಾಂತರ ರೂಪಾಯಿಗಳ ಆದಾಯ ಬಂದಿತ್ತು. ಆದರೆ ಈಗ ಕಡಿಮೆ ಆಗಿದೆ. ಇದರಿಂದ ಅರ್ಚಕರ ಉಪಜೀವನಕ್ಕೂ ತೊಂದರೆ ಉಂಟಾಗಿದೆ.
ಅಕ್ಟೋಬರ್ ತಿಂಗಳು ದಸರಾ ಹಬ್ಬದ ಹಿನ್ನೆಲೆ ದೇವಿಗೆ ವಿಶೇಷ ಪೂಜೆ ಹಾಗೂ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಆದರೆ ಕೊರೊನಾ ಭೀತಿಯಿಂದ ಭಕ್ತರ ಸಂಖ್ಯೆ ವಿರಳ ಆಗುವ ಸಾಧ್ಯತೆ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಭಕ್ತರಿಗೆ ಅನುಕೂಲಕರ ರೀತಿಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಅರ್ಚಕರಾದ ಮಹೇಶ್ ತಿಳಿಸಿದ್ದಾರೆ.