ಲಂಡನ್:ವಿಂಬಲ್ಡನ್ ಚಾಂಪಿಯನ್ಶಿಪ್ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್ಫೈನಲ್ಸ್ ಪ್ರವೇಶಿಸಿದರೆ, ಪುರುಷರ ಸಿಂಗಲ್ಸ್ನಲ್ಲಿ ನೊವಾಕ್ ಜೊಕೊವಿಕ್ ಸೆಮಿಫೈನಲ್ಸ್ ತಲುಪಿದ್ದಾರೆ.
ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರು ವಿಂಬಲ್ಡನ್ ಚಾಂಪಿಯನ್ಶಿಪ್ನ ಪುರುಷರ ಡಬಲ್ಸ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ. ಅವರು ತಮ್ಮ ರೌಂಡ್ ಆಫ್ 16 ಪಂದ್ಯದಲ್ಲಿ ನೆದರ್ಲೆಂಡ್ಸ್ನ ಡೇವಿಡ್ ಪೆಲ್ ಮತ್ತು ಯುಎಸ್ಎಯ ರೀಸ್ ಸ್ಟಾಲ್ಡರ್ ಅವರನ್ನು ಸೋಲಿಸಿದರು. ಆಲ್ ಇಂಗ್ಲೆಂಡ್ ಕ್ಲಬ್ನ ಗ್ರಾಸ್ ಕೋರ್ಟ್ನಲ್ಲಿ ಆರನೇ ಶ್ರೇಯಾಂಕದ ಇಂಡೋ-ಆಸೀಸ್ ಜೋಡಿ 7-5, 4-6, 7(10)-6(5) ರಿಂದ ಎರಡು ಗಂಟೆ 19 ನಿಮಿಷಗಳಲ್ಲಿ ಶ್ರೇಯಾಂಕ ರಹಿತ ಪೆಲ್ ಮತ್ತು ಸ್ಟಾಲ್ಡರ್ ವಿರುದ್ಧ ಜಯಗಳಿಸಿತು.
ಎಟಿಪಿ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ವಿಶ್ವದ 12ನೇ ಶ್ರೇಯಾಂಕದ ಬೋಪಣ್ಣ ಮತ್ತು ಅದೇ 16ನೇ ಶ್ರೇಯಾಂಕದ ಎಬ್ಡೆನ್ ಮೊದಲ ಸೆಟ್ನಲ್ಲಿ ಶಿಸ್ತಿನ ಪ್ರದರ್ಶನ ನೀಡಿದರು. ಎರಡು ಜೋಡಿಯ ನಡುವಿನ ಹೋರಾಟ ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲ ಸೆಟ್ನ್ನು ಸರಳವಾಗಿ ಗೆದ್ದುಕೊಂಡಿದ್ದ ಇಂಡೋ ಆಸಿಸ್ ಜೋಡಿಗೆ ಎರಡನೇ ಸೆಟ್ನಲ್ಲಿ 4-6 ಅಂತರದ ಸೋಲು ಎದುರಾಗಿತ್ತು.
ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಿಂದಾಗಿ ಮೂರನೇ ಸೆಟ್ನ ಆರಂಭ ತಡವಾಯಿತು. ಆದರೆ ಎರಡನೇ ಸೆಟ್ ವೇಳೆಗೆ ಆಗಿದ್ದ ಟೈ ಮೂರನೇ ಸೆಟ್ನಲ್ಲಿ ಬಿಗಿ ಹೋರಾಟಕ್ಕೆ ಕಾರಣವಾಯಿತು. ಎರಡು ಜೋಡಿಯ ನಡುವಿನ ಹೋರಾಟ ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಕಣ್ಣು ಮಿಟುಕಿಸಲೂ ಅವಕಾಶ ನೀಡಲಿಲ್ಲ ಎಂದರೆ ತಪ್ಪಾಗದು. ಈ ತೀವ್ರ ಹೋರಾಟ 6-6 ರಿಂದ ಟೈ ಆಗಿತ್ತು. ಟ್ರೈ ಬ್ರೇಕರ್ನಲ್ಲಿ ಬೋಪಣ್ಣ-ಎಬ್ಡೆನ್ ಮೂರು ಮ್ಯಾಚ್ ಪಾಯಿಂಟ್ಗಳನ್ನು ಉಳಿಸಿ ಸ್ಪರ್ಧೆಯಲ್ಲಿ 10 ಪಾಯಿಂಟ್ಗಳನ್ನು ಗಳಿಸಿತು. ಇದರಿಂದ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಭರ್ಜರಿ ಗೆಲುವು ದಾಖಲಿಸಿತು.
ಕ್ವಾರ್ಟರ್ನಲ್ಲಿ ಅವರು ಡಚ್ ಜೋಡಿಯಾದ ಬಾರ್ಟ್ ಸ್ಟೀವನ್ಸ್ ಮತ್ತು ಟ್ಯಾಲನ್ ಗ್ರೀಕ್ಸ್ಪೂರ್ ಅವರನ್ನು ಎದುರಿಸಲಿದ್ದಾರೆ. ಇದಕ್ಕೂ ಮುನ್ನ ಸೋಮವಾರ ನಡೆದ ಪಂದ್ಯದಲ್ಲಿ ಎರಡನೇ ಸುತ್ತಿನಲ್ಲಿ ಬೋಪಣ್ಣ-ಎಬ್ಡೆನ್ ನೇರ ಗೇಮ್ಗಳಲ್ಲಿ ಬ್ರಿಟನ್ನ ಜಾಕೋಬ್ ಫಿಯರ್ನ್ಲಿ ಮತ್ತು ಜೊಹಾನಸ್ ವಿರುದ್ಧ ಜಯ ಸಾಧಿಸಿದ್ದರು.