ಹೈದರಾಬಾದ್:ಟೋಕಿಯೋ ಒಲಿಂಪಿಕ್ಸ್-2020ಯಲ್ಲಿ ಎರಡನೇ ದಿನ ಸಿಹಿ-ಕಹಿ ಕಂಡಿರುವ ಭಾರತೀಯ ಅಥ್ಲೀಟ್ಗಳು ಮೂರನೇ ದಿನ ಪದಕ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಇಂದು 7 ವಿವಿಧ ಕ್ರೀಡೆಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ.
ಪಿ ವಿ ಸಿಂಧು, ಬಾಕ್ಸರ್ ಮೇರಿ ಕೋಮ್ ಸೇರಿದಂತೆ 3ನೇ ದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಣಕ್ಕಿಳಿಯುವ ಭಾರತೀಯ ಕ್ರೀಡಾಪಟುಗಳ ವಿವರ ಇಲ್ಲಿದೆ..
ಪಿವಿ ಸಿಂಧು: ಬ್ಯಾಡ್ಮಿಂಟನ್
ಈ ಹಿಂದೆ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಇಂದು ತಮ್ಮ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿದ್ದಾರೆ. ವಿಶ್ವ ಚಾಂಪಿಯನ್ ಸಿಂಧು ಇಸ್ರೇಲ್ನ ಕ್ಸೆನಿಯಾ ಪೊಲಿಕರ್ಪೋವಾ ಅವರನ್ನು ಎದುರಿಸಲಿದ್ದಾರೆ.
ಸಿಂಧು ಇರುವ ಜೆ ಗುಂಪಿನಲ್ಲಿ ಹಾಂಗ್ ಕಾಂಗ್‌ನ ಚೆಯುಂಗ್ ನ್ಗಾನ್ ಯಿ ಕೂಡ ಅವಕಾಶ ಪಡೆದಿದ್ದಾರೆ. ಈ ಗುಂಪಿನಲ್ಲಿ ಪಿವಿ ಸಿಂಧು ಮುಂದಿನ ಸುತ್ತು ಪ್ರವೇಶಿಸುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ.
ಮೇರಿ ಕೋಮ್: ಬಾಕ್ಸಿಂಗ್
2012ರಲ್ಲಿ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಈ ಬಾರಿ ಟೋಕಿಯೋದಲ್ಲಿ ತಮ್ಮ ಪ್ರದರ್ಶನವನ್ನು ಉತ್ತಮಗೊಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಭಾರತೀಯ ಬಾಕ್ಸರ್ ಭಾನುವಾರ ಡೊಮೆನಿಕನ್ ರಿಪಬ್ಲಿಕ್ನ ಮಿಗುಯೆಲಿನ ಹೆರ್ನಾಂಡೆಜ್ ಗಾರ್ಸಿಯಾ ವಿರುದ್ಧ ಸೆಣಸಾಡಲಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಬಹುಪಾಲು ಎಲ್ಲ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿರುವ ಮೇರಿ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಲು ಟೋಕಿಯೋ ಕೊನೆಯ ಅವಕಾಶವಾಗಿದೆ. ಇದು ಅವರ ಕನಸು ಕೂಡ ಆಗಿದೆ.
ಮನು ಭಾಕರ್, ಯಶಸ್ವಿನಿ ಸಿಂಗ್ ದೇಸ್ವಾಲ್- ಶೂಟಿಂಗ್
ಇಂದು ಭಾರತೀಯ ಶೂಟರ್ಗಳು ಭಾರಿ ನಿರಾಸೆಯನ್ನುಂಟು ಮಾಡಿದ್ದಾರೆ. ಪದಕದ ಭರವಸೆ ಹುಟ್ಟಿಸಿದ್ದ ಸೌರಭ್ ಚೌದರಿ 10 ಮೀಟರ್ ಏರ್ ಪಿಸ್ತೂಲ್ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಅಭಿಷೇಕ್ ವರ್ಮಾ ಫೈನಲ್ ಪ್ರವೇಶಿಸುವುದಕ್ಕೆ ವಿಫಲರಾದರು. ಮಹಿಳೆಯರ ವಿಭಾಗದಲ್ಲಿ ವಿಶ್ವದ ನಂಬರ್ 1 ಎಳವೆನಿಲ್ ಇಲರಿವನ್ ಹಾಗೂ ಅಪೂರ್ವಿ ಚಂಡೇಲಾ ಕೂಡ ವಿಫಲರಾದರು.
ಭಾನುವಾರ ಮತ್ತಿಬ್ಬರು ಭರವಸೆಯ ಶೂಟರ್ಗಳಾದ ಯಶಸ್ವಿನಿ ಸಿಂಗ್ ಮತ್ತು ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಭಾಗವಹಿಸಲಿದ್ದಾರೆ. ಇಬ್ಬರ ಮೇಲೂ ಭಾರಿ ನಿರೀಕ್ಷೆಯಿದ್ದು, ಭಾರತಕ್ಕೆ ಪದಕ ತಂದುಕೊಡಲು ಉತ್ಸುಕರಾಗಿದ್ದಾರೆ.
ದಿವ್ಯಾನ್ಶ್ ಪನ್ವಾರ್: ಶೂಟಿಂಗ್
ವಿಶ್ವದ 8ನೇ ಶ್ರೇಯಾಂಕದ ಪನ್ವಾರ್ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಪನ್ವರ್ ಭಾರತಕ್ಕೆ ಪದಕ ತಂದುಕೊಡಬಲ್ಲ ಅತ್ಯಂತ ಅಮೂಲ್ಯ ಅಥ್ಲೀಟ್ ಆಗಿದ್ದಾರೆ. 18 ವರ್ಷದ ಪನ್ವಾರ್ 2019ರಲ್ಲಿ ಎರಡು ಬಾರಿ ಜೂನಿಯರ್ ವಿಶ್ವಕಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಭಾರತ ಪುರುಷರ ಹಾಕಿ
ಮೊದಲ ಪಂದ್ಯದಲ್ಲಿ 3-2ರಿಂದ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಭಾರತ ತಂಡದ ನಾಳೆ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.