ಬೆಂಗಳೂರು: 38 ವರ್ಷದ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ತಮ್ಮ ನಿವೃತ್ತಿಯ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ತಂಡಕ್ಕಾಗಿ ನನಗೆ ಯಾವಾಗ ಆಡಲು ಸಾಧ್ಯವಿಲ್ಲ ಎಂದು ಅನ್ನಿಸುವುದೋ ಅಂದು ವಿದಾಯ ಹೇಳುತ್ತೇನೆ. ಅಲ್ಲಿಯವರೆಗೆ ಮೈದಾನದಲ್ಲಿರುತ್ತೇನೆ ಎಂದರು.
ಸುನಿಲ್ ಛೆಟ್ರಿ ಮತ್ತಷ್ಟು ಆಡಲು ಶಕ್ತರಾಗಿದ್ದಾರೆ ಎಂಬುದಕ್ಕೆ ಸದ್ಯ ನಡೆಯುತ್ತಿರುವ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಎಸ್ಎಎಫ್ಎಫ್) ಚಾಂಪಿಯನ್ಶಿಪ್ನ ಮೂರು ಪಂದ್ಯಗಳೇ ಸಾಕ್ಷಿ. ಈ ಪಂದ್ಯಗಳಲ್ಲಿ ಅವರು 5 ಗೋಲು ಗಳಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ. ನಾಳೆ ಭಾರತ- ಲೆಬನಾನ್ ನಡುವೆ ಸೆಮಿಫೈನಲ್ ನಡೆಯಲಿದೆ.
ಲೆಬನಾನ್ ವಿರುದ್ಧದ ಪಂದ್ಯಕ್ಕೂ ಮುನ್ನಾದಿನ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಛೆಟ್ರಿ, "ದೇಶಕ್ಕಾಗಿ ನನ್ನ ಕೊನೆಯ ಪಂದ್ಯ ಯಾವಾಗ ಎಂದು ನನಗೆ ಗೊತ್ತಿಲ್ಲ. ನಾನು ಎಂದಿಗೂ ದೀರ್ಘಾವಧಿಯ ಗುರಿಗಳನ್ನು ಹೊಂದಿಲ್ಲ. ಮುಂದಿನ ಪಂದ್ಯದ ಬಗ್ಗೆ ಯೋಚಿಸುತ್ತೇನೆ ಅಷ್ಟೇ. ಮುಂದಿನ 10 ದಿನಗಳ ಬಗ್ಗೆ ಯೋಚಿಸುತ್ತೇನೆ. ನಿವೃತ್ತಿ ಒಂದು ದಿನ ಸಂಭವಿಸುತ್ತದೆ. ನಾನು ಆಟವನ್ನು ಬಯಸದ ದಿನದಲ್ಲಿ ಅದು ನಡೆಯಲಿದೆ. ಆದರೆ ಅಲ್ಲಿಯವರೆಗೆ ಆ ಬಗ್ಗೆ ಯೋಚಿಸಲಾರೆ" ಎಂದು ಹೇಳಿದರು.