ಸಂಚಿಯಾನ್: ಭಾರತದ ಏಸ್ ಶಟ್ಲರ್ಗಳಾದ ಪಿ.ವಿ.ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಕೊರಿಯನ್ ಓಪನ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ. ಆದರೆ, ಯುವ ಪ್ರತಿಭೆ ಲಕ್ಷ್ಯ ಸೇನ್ 2ನೇ ಸುತ್ತಿನ ಪಂದ್ಯದಲ್ಲೇ ಸೋಲು ಕಂಡು ನಿರಾಶೆ ಅನುಭವಿಸಿದ್ದಾರೆ.
ವಿಶ್ವದ 7ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು ಗುರುವಾರ ನಡೆದ ಪಂದ್ಯದಲ್ಲಿ ಜಪಾನ್ನ ಆಯಾ ಒಹೋರಿ 21-15, 21-10ರ ಅಂತರದಲ್ಲಿ ಗೆಲ್ಲುವ ಮೂಲಕ ಜಪಾನೀಸ್ ಶಟ್ಲರ್ ವಿರುದ್ಧ 12-0ಯ ಮುನ್ನಡೆಯನ್ನು ವಿಸ್ತರಿಸಿಕೊಂಡರು. ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದುಕೊಂಡಿರುವ 2 ಒಲಿಂಪಿಕ್ಸ್ ಪದಕಗಳ ವಿಜೇತೆ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸಾನನ್ಒಗ್ಬಾಮೃಂಗ್ಫಾನ್ ವಿರುದ್ಧ ಸೆಣಸಾಡಲಿದ್ದಾರೆ. ಸಿಂಧು ಸ್ವಿಸ್ ಓಪನ್ನಲ್ಲಿ ಥಾಯ್ ಶಟ್ಲರ್ ಮಣಿಸಿ ಚಾಂಪಿಯನ್ ಆಗಿದ್ದರು.
ಶ್ರೀಕಾಂತ್ಗೆ ಗೆಲುವು, ಲಕ್ಷ್ಯಗೆ ನಿರಾಶೆ:ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ 2ನೇ ಸುತ್ತಿನ ಪಂದ್ಯದಲ್ಲಿ 24ನೇ ಶ್ರೇಯಾಂಕದ ಇಸ್ರೇಲ್ನ ಮಿಶಾ ಜಿಲ್ಬರ್ಮನ್ ವಿರುದ್ಧ 21-18, 21-6ರ ಪ್ರಾಬಲ್ಯಯುತ ಜಯ ಸಾಧಿಸಿದರು. ಅವರು ಮುಂದಿನ ಸುತ್ತಿನಲ್ಲಿ ಸ್ಥಳೀಯ ಸ್ಟಾರ್, ಮಾಜಿ ನಂ.1 ಆಗಿರುವ ಸನ್ ವಾನ್ ವಿರುದ್ಧ ಕಾದಾಡಲಿದ್ದಾರೆ.