ಬೆಂಗಳೂರು:ನಾಯಕ ಸುನಿಲ್ ಚೆಟ್ರಿ ಕಾಲ್ಚಳಕ ಮತ್ತು ಮಹೇಶ್ ಸಿಂಗ್ ಬಾರಿಸಿದ ಗೋಲಿನಿಂದಾಗಿ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ 14ನೇ ಬಾರಿಗೆ ಸೆಮಿಫೈನಲ್ ತಲುಪಿತು. ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ಶನಿವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳಿಂದ ಭಾರತ ಗೆಲುವು ಸಾಧಿಸಿತು. 2 ಪಂದ್ಯಗಳನ್ನು ಸೋಲುವ ಮೂಲಕ ಕಳೆದ ಬಾರಿಯ ಫೈನಲಿಸ್ಟ್ ನೇಪಾಳ ಸೆಮೀಸ್ ರೇಸ್ನಿಂದ ಹೊರಬಿತ್ತು.
2 ಗೆಲುವುಗಳ ಮೂಲಕ ಭಾರತ ಎ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಇಷ್ಟೇ ಅಂಕ ಹೊಂದಿರುವ ಕುವೈತ್ ಅಗ್ರಸ್ಥಾನದಲ್ಲಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ 8 ಆಟಗಾರರನ್ನು ಬದಲಾವಣೆ ಮಾಡಲಾಗಿತ್ತು. ಈ ಹಿಂದಿನ ಪಂದ್ಯದ ಹೀರೋಗಳಾದ ಸುನೀಲ್ ಛೆಟ್ರಿ, ಅನಿರುದ್ಧ್ ಥಾಪಾ ಮತ್ತು ಸಹಲ್ ಅಬ್ದುಲ್ ಸಮದ್ ಅವರನ್ನು ಮಾತ್ರ ಉಳಿಸಿಕೊಳ್ಳಲಾಗಿತ್ತು.
ಆಟದ ಮೊದಲಾರ್ಧದಲ್ಲಿ ನೇಪಾಳ ಕಟು ಹೋರಾಟ ಪ್ರದರ್ಶಿಸಿತು. ಇದರಿಂದ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಭಾರತ ಹಲವು ಗೋಲು ಬಾರಿಸಲು ಯತ್ನಿಸಿ ವಿಫಲವಾಯಿತು. ಇದರಿಂದ ಮೊದಲಾರ್ಧ ಗೋಲುರಹಿತವಾಗಿ ಕೊನೆಗೊಂಡಿತು.
ವಿರಾಮದ ನಂತರ ಭಾರತ ಆಟಕ್ಕೆ ವೇಗ ನೀಡಿತು. ಆಕ್ರಮಣಕಾರಿ ಆಟಕ್ಕೆ ಮುಂದಾದ ಆಟಗಾರರು ಪ್ರತಿ ಬಾರಿಯೂ ಚೆಂಡನ್ನು ಗೋಲಿನತ್ತ ತೆಗೆದುಕೊಂಡು ಹೋದರು. ಇದರ ಫಲವಾಗಿ 61ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಚೆಂಡನ್ನು ಯಶಸ್ವಿಯಾಗಿ ಗೋಲು ಪೆಟ್ಟಿಗೆ ಸೇರಿಸಿದರು. ಇದು ಅವರ ಅಂತಾರಾಷ್ಟ್ರೀಯ ಪಂದ್ಯದ 91ನೇ ಗೋಲಾಗಿದೆ. 1-0 ಮುನ್ನಡೆ ಪಡೆದ ಭಾರತ ಮತ್ತಷ್ಟು ವೇಗದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿತು.