ನವದೆಹಲಿ:ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತ 15 ಚಿನ್ನದ ಪದಕ ಸೇರಿದಂತೆ ಒಟ್ಟು 30 ಪದಕಗಳನ್ನು ಪಡೆದು ಈ ಟೂರ್ನಿಯಲ್ಲಿ ಅಗ್ರಸ್ಥಾನದ ಸಾಧಿಸಿದೆ.
ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ಭಾನುವಾರ ನಡೆದ ಪುರುಷ ಹಾಗೂ ಮಹಿಳೆಯರ ಟ್ರ್ಯಾಕ್ ತಂಡದ ವಿಭಾಗಗಳಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡುವ ಮೂಲಕ ಕೊನೆಯ ದಿನ 2 ಚಿನ್ನ ಮತ್ತು 1 ಬೆಳ್ಳಿ ಪದಕ ಪಡೆದ ಅತಿಥೇಯ ತಂಡ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿದೆ.
ಭಾನುವಾರ ನಡೆದ ಮಹಿಳೆಯರ ಟ್ರ್ಯಾಪ್ ತಂಡದ ಫೈನಲ್ನಲ್ಲಿ ರಾಜೇಶ್ವರಿ ಕುಮಾರಿ, ಮನೀಶಾ ಕೀರ್ ಮತ್ತು ಶ್ರೇಯಸಿ ಸಿಂಗ್ ಒಳಗೊಂಡಿದ್ದ ಭಾರತದ ತಂಡ ಕಜಕಿಸ್ತಾನ ತಂಡದ ವಿರುದ್ಧ 6-0ಯಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕಿನನ್ ಚೆನಾಯ್, ಪೃಥ್ವಿರಾಜ್ ತೊಂಡೈಮನ್ ಮತ್ತು ಲಕ್ಷ್ಯ ಇದ್ದ ಪುರುಷರ ತಂಡ ಸ್ಲೊವಾಕಿಯಾ ವಿರುದ್ಧ 6-4ರಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ 15ನೇ ಚಿನ್ನದ ಪದಕದ ತಂದುಕೊಟ್ಟರು.
53 ದೇಶಗಳನ್ನು ಪ್ರತಿನಿಧಿಸಿದ್ದ ಈ ಟೂರ್ನಿಯಲ್ಲಿ 294 ಶೂಟರ್‌ಗಳು ಭಾಗವಹಿಸಿದ್ದರು. ಒಟ್ಟಾರೆ ವಿಶ್ವಕಪ್ ಕೂಟದಲ್ಲಿ ಭಾರತ 15 ಚಿನ್ನ, 9 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದೆ. 2ನೇ ಸ್ಥಾನದಲ್ಲಿರುವ ಅಮೆರಿಕ 4 ಚಿನ್ನ, 3 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 8 ಪದಕ ಪಡೆದು 2ನೇ ಸ್ಥಾನ ಪಡೆದರೆ, ಇಟಲಿ 2 ಚಿನ್ನ ಮತ್ತು ಕಂಚಿನೊಂದಿಗೆ ತೃತೀಯ ಸ್ಥಾನಪಡೆಯಿತು.
ಈ ಕುರಿತು ಟ್ವಿಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಎಲ್ಲ ಸಾಧಕರನ್ನು ಅಭಿನಂದಿಸಿದ್ದಾರೆ.