ನವದೆಹಲಿ: ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ 17 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಫ್ರೀಸ್ಟೈಲ್ ಕುಸ್ತಿಪಟುಗಳು ನಾಲ್ಕು ಚಿನ್ನದ ಪದಕಗಳು ಸೇರಿದಂತೆ ಎಂಟು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಾಲ್ಕು ಚಿನ್ನದ ಪದಕಗಳಲ್ಲದೆ, ಭಾರತದ ಕುಸ್ತಿಪಟುಗಳು ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಬುಧವಾರ ನಡೆದ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟುಗಳು ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಜಯಿಸಿದರು.
ಓದಿ:ರಷ್ಯಾದೊಂದಿಗಿನ ತಂದೆಯ ಹೋರಾಟದ ನಡುವೆಯೂ ದೇಶಕ್ಕೆ ಪದಕ ಗೆದ್ದಕೊಟ್ಟ ಉಕ್ರೇನಿನ ಯುವ ಈಜು ಸ್ಪರ್ಧಿ!
ಭಾರತದ ಫ್ರೀಸ್ಟೈಲ್ ತಂಡ 188 ಅಂಕಗಳೊಂದಿಗೆ ಏಷ್ಯನ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆದ್ದುಕೊಂಡರೆ, ಕಜಕಿಸ್ತಾನ್ ತಂಡ 150 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನವನ್ನು ಗಳಿಸಿತು. ಉಜ್ಬೇಕಿಸ್ತಾನ್ 145 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು.
ಬುಧವಾರ ನಡೆದ ಕುಸ್ತಿಪಟು ಸ್ಪರ್ಧೆಯಲ್ಲಿ ಭಾರತಕ್ಕೆ ಕನ್ನಡಿಗ ನಿಂಗಪ್ಪ (45ಕೆಜಿ), ಶುಭಂ (48ಕೆಜಿ) ಮತ್ತು ವೈಭವ್ ಪಾಟೀಲ್ (55ಕೆಜಿ) ಚಿನ್ನದ ಪದಕ ಗೆದ್ದರೆ, ಪ್ರತೀಕ್ ದೇಶಮುಖ್ (110 ಕೆಜಿ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನರಸಿಂಗ್ ಪಾಟೀಲ್ (51 ಕೆಜಿ) ಮತ್ತು ಸೌರಭ್ (60 ಕೆಜಿ) ತಲಾ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. 23 ವರ್ಷದೊಳಗಿನವರ ವಿಭಾಗದ ಸ್ಪರ್ಧೆಯು ಗುರುವಾರ ಗ್ರೆಕೊ ರೊಮನ್ ಶೈಲಿಯ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗಲಿದೆ.