ನಮ್ಕುಮ್(ರಾಂಚಿ):ಜಾರ್ಖಂಡ್ ರಾಜ್ಯ ಭಾರತಕ್ಕಾಗಿ ಅಥ್ಲೀಟ್ಗಳನ್ನು ಸೃಷ್ಠಿಸಿಕೊಡುವ ಕೇಂದ್ರ ಎಂದು ಕರೆಯಲಾಗುತ್ತದೆ. ಯಾಕೆಂದರೆ, ಈಗಾಗಲೇ ಆ ರಾಜ್ಯ ದೇಶಕ್ಕಾಗಿ ಪದಕ ತಂದುಕೊಟ್ಟಿರುವ ಹಾಗೂ ಅದ್ಭುತ ಕೌಶಲ್ಯಗಳನ್ನು ಹೊಂದಿರುವ ಸಾಕಷ್ಟು ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ. ಅಲ್ಲಿನ ಸರ್ಕಾರ ಕೂಡ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಥ್ಲೀಟ್ಗಳ ಬೆಳವಣಿಗೆಗೆ ಶ್ರಮಿಸುತ್ತಿದೆ.
ಆದಾಗ್ಯೂ, ದೇಶಕ್ಕಾಗಿ ಹಾಗೂ ರಾಜ್ಯಕ್ಕಾಗಿ ಸಾಕಷ್ಟು ಪದಕ ಗೆದ್ದುಕೊಟ್ಟಿರುವ ಪ್ರಸ್ತುತ ಮತ್ತು ನಿವೃತ್ತಿ ಹೊಂದಿರುವ ಹಲವಾರು ಕ್ರೀಡಾಪಡುಗಳು ಹಣಕಾಸಿನ ದುಸ್ಥಿತಿ ಎದುರಿಸುತ್ತಿದ್ದಾರೆ. ಅಂತಹವರಲ್ಲಿ ಮರಿಯಾ ಗೊರೆಟ್ಟಿ ಖಲ್ಖಾ ಕೂಡ ಒಬ್ಬರು. ಮರಿಯಾ ಜಾವಲಿನ್ ಥ್ರೋನಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಹಲವಾರು ಪದಕ ತಂದುಕೊಟ್ಟಿದ್ದಾರೆ.
ಆದರೆ, ಅವರ ಇಂದಿನ ಪರಿಸ್ಥಿತಿ ದಯನೀಯಾವಾಗಿದೆ. ಅವರು ತಮ್ಮ ಜೀವನ ನಿರ್ವಹಣೆಗೂ ಪರಿತಪಿಸುತ್ತಿದ್ದು, ಸರ್ಕಾರದ ಮುಂದೆ ನೆರವಿಗಾಗಿ ಬೇಡಿಕೊಳ್ಳುತ್ತಿದ್ದಾರೆ. ಕೇವಲ ಆರ್ಥಿಕ ಪರಿಸ್ಥಿತಿಯಿಲ್ಲದೆ ಅವರ, ಅರೋಗ್ಯ ಸ್ಥಿತಿ ಕೂಡ ತೀರಾ ಹದಗೆಟ್ಟಿದೆ. ಕಳೆದ ಒಂದೆರಡು ವರ್ಷಗಳ ಹಿಂದೆ ಮರಿಯಾ ಶ್ವಾಸಕೋಶ ಖಾಯಿಲೆಯಿಂದ ಬಳಲಿ ರಿಮ್ಸ್ಗೆ ದಾಖಲಾಗಿದ್ದರು. ಅವರ ಒಂದು ಶ್ವಾಸಕೋಶ ಕೆಲಸ ಮಾಡುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದರು. ಆಗ ಸರಿಯಾದ ಸಮಯಕ್ಕೆ ನೆರವಿಗೆ ಬಂದ ರಾಜ್ಯ ಕ್ರೀಡಾ ನಿರ್ದೇಶಕ ಅನಿಲ್ ಕುಮಾರ್ ಸಿಂಗ್ ಮತ್ತು ಸ್ಪೋರ್ಟ್ಸ್ ಇನ್ಸ್ಟ್ರಕ್ಟರ್ ಪ್ರವೀಣ್ ಕುಮಾರ್ ಮರಿಯಾ ಅವರ ಜೀವವನ್ನು ಉಳಿಸಿದ್ದರು.
ಆದರೆ, ಅಂದು ಆಸ್ಪತ್ರೆಯಿಂದ ಬಂದ ನಂತರ ಯಾರೊಬ್ಬರು ತಮ್ಮನ್ನು ಭೇಟಿಯಾಗಿಲ್ಲ. ತಮ್ಮ ಆರೋಗ್ಯ ಹೇಗಿದೆ ಎಂದು ವಿಚಾರಿಸಿಲ್ಲ ಎಂದು ಮರಿಯಾ ತಮ್ಮ ನೋವನ್ನು ಈಟಿವಿ ಭಾರತದೊಂದಿಗೆ ತೋಡಿಕೊಂಡಿದ್ದಾರೆ. ಪ್ರಸ್ತುತ ಅವರು ತಮ್ಮ ಸಹೋದರಿ ಮನೆಯಲ್ಲಿ ವಾಸವಿದ್ದು, ತಮಗೆ ಹಣಕಾಸಿನ ನೆರವು ನೀಡಬೇಕೆಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ.