ನ್ಯೂಯಾರ್ಕ್ :ಭಾರತದ ಸ್ಟಾರ್ ಟೆನಿಸ್ ಆಟಗಾರರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರು ಯುಎಸ್ ಓಪನ್-2023ರ ಪುರುಷರ ಡಬಲ್ಸ್ನಲ್ಲಿ ಕೊನೆಯ ಘಟ್ಟ ತಲುಪಿದ್ದಾರೆ. ನ್ಯೂಯಾರ್ಕ್‌ನ ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಚ್ ಜೋಡಿ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ ನೇರ ಸೆಟ್‌ಗಳ ಜಯದೊಂದಿಗೆ ಫೈನಲ್ಗೆ ಲಗ್ಗೆ ಇಟ್ಟರು.
ಈ ವರ್ಷ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಆರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿ, ಮೊದಲ ಸೆಟ್ ಅನ್ನು ಟೈ-ಬ್ರೇಕರ್ನಲ್ಲಿ 7-6 (7-3) ಅಂತರದಿಂದ ಗೆದ್ದುಕೊಂಡಿತ್ತು. ಎರಡನೇ ಸೆಟ್ನಲ್ಲೂ ಅದ್ಭುತ ಆಟ ಮುಂದುವರೆಸಿ 6-2 ಅಂತರದಿಂದ ಒಂದು ಗಂಟೆ 34 ನಿಮಿಷಗಳಲ್ಲಿ ಜಯ ಸಾಧಿಸಿದರು. ಆರ್ಥರ್ ಆಶ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ತಂಡ ಮೂರನೇ ಶ್ರೇಯಾಂಕದ ಯುಎಸ್‌ಎ ರಾಜೀವ್ ರಾಮ್ ಮತ್ತು ಗ್ರೇಟ್ ಬ್ರಿಟನ್‌ನ ಜೋ ಸಾಲಿಸ್‌ಬರಿ ವಿರುದ್ಧ ಸೆಣಸಾಡುವರು. ರಾಮ್ ಮತ್ತು ಸಾಲಿಸ್ಬರಿ ಎರಡು ಬಾರಿ ಯುಎಸ್ ಓಪನ್ ಪುರುಷರ ಡಬಲ್ಸ್ ಹಾಲಿ ಚಾಂಪಿಯನ್ ಆಗಿದ್ದಾರೆ.
ಇನ್ನೊಂದೆಡೆ, ಕೊಡಗಿನ ಕುವರ ರೋಹನ್ ಬೋಪಣ್ಣ (43) ಟೆನಿಸ್ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಇದು ಇವರ ವೃತ್ತಿಜೀವನದ ಎರಡನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದೆ. ಇದೇ ಜೋಡಿ ಮಾರ್ಚ್ನಲ್ಲಿ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದುಕೊಂಡಿತ್ತು. ಇದರೊಂದಿಗೆ 2015ರಲ್ಲಿ ತಮ್ಮ 42ನೇ ವಯಸ್ಸಿನಲ್ಲಿ ಸಿನ್ಸಿನಾಟಿ ಮಾಸ್ಟರ್ಸ್ ಪ್ರಶಸ್ತಿ ಗೆದ್ದು ಬೀಗಿದ್ದ ಕೆನಡಾದ ಡೇನಿಯಲ್ ನೆಸ್ಟರ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎಂಬ ಖ್ಯಾತಿಗೆ ಬೋಪಣ್ಣ ಪಾತ್ರರಾಗಿದ್ದರು. ಕೊನೆಯ ಬಾರಿಗೆ 2010ರಲ್ಲಿ ಬೋಪಣ್ಣ ಅವರು ಪಾಕ್ ಟೆನಿಸ್ ಆಟಗಾರ ಐಸಾಮ್-ಉಲ್-ಹಕ್ ಖುರೇಷಿ ಅವರೊಂದಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರು.