ಹ್ಯಾಂಗ್‌ಝೌ (ಚೀನಾ): 43 ವರ್ಷದ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರ ಜೋಡಿ ಏಷ್ಯನ್ ಗೇಮ್ಸ್ನಲ್ಲಿ ಫೈನಲ್ ಪ್ರವೇಶಿಸಿದೆ. ಮಿಶ್ರ ಡಬಲ್ಸ್ನಲ್ಲಿ ಚೈನೀಸ್ ತೈಪೆಯ ಯು-ಹಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾಂಗ್ ವಿರುದ್ಧ 6-1, 3-6, 10-4 ಸೆಟ್‌ಗಳಿಂದ ಗೆದ್ದು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಭಾರತದ ಜೋಡಿಯು ಮೊದಲ ಸೆಟ್ನ ಆರಂಭಿಕ ಲಾಭವನ್ನು ಪಡೆದು 28 ನಿಮಿಷದಲ್ಲಿ ವಶ ಪಡಿಸಿಕೊಂಡಿದೆ. ಮೂರನೇ ಶ್ರೇಯಾಂಕದ ಚೈನೀಸ್ ತೈಪೆ ಜೋಡಿಯು ಎರಡನೇ ಸೆಟ್‌ನಲ್ಲಿ ಪುನರಾಗಮನ ಮಾಡಿದೆ. ಎರಡನೇ ಸೆಟ್ ಅನ್ನು 3-6 ರಿಂದ ಗೆದ್ದುಕೊಂಡರು. ಇದರಿಂದ ಪಂದ್ಯ ಟೈಬ್ರೇಕರ್ ಹಂತಕ್ಕೆ ಪ್ರವೇಶಿಸಿತು. ಟೈ ಬ್ರೇಕರ್ನಲ್ಲಿ ಭಾರತೀಯ ಜೋಡಿ 10-4ರಿಂದ ಪಂದ್ಯ ಗೆದ್ದು, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ಚಿನ್ನದ ಪದಕಕ್ಕಾಗಿ ಭಾರತ ನಾಳೆ (ಶನಿವಾರ) ಚೀನಾ ತೈಪೆಯ ಇತರ ಜೋಡಿಗಳಾದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ಅವರನ್ನು ಎದುರಿಸಲಿದೆ.
ಗಮನಾರ್ಹವಾಗಿ, ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ತಮ್ಮ ಚೊಚ್ಚಲ ಏಷ್ಯನ್ ಗೇಮ್ಸ್ ಮಿಶ್ರ ಡಬಲ್ಸ್ ಪದಕವನ್ನು ಖಾತ್ರಿಪಡಿಸುವ ಅಂಚಿನಲ್ಲಿದ್ದಾರೆ. ಕನಿಷ್ಠ ಬೆಳ್ಳಿ ಪದಕವನ್ನಾದರೂ ಈ ಜೋಡಿ ಗೆಲ್ಲಲಿದೆ. ಹಿಂದಿನ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವು ತಲಾ ಎರಡು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು ಆರು ಮಿಶ್ರ ಡಬಲ್ಸ್ ಪದಕಗಳನ್ನು ಗೆದ್ದಿದೆ.