ನವದೆಹಲಿ: ಭಾರತೀಯ ಪುರುಷರ ಹಾಕಿ ತಂಡದ ಅನುಭವಿ ಸ್ಟ್ರೈಕರ್ ಎಸ್.ವಿ.ಸುನಿಲ್ 14 ವರ್ಷಗಳ ಹಾಕಿ ಆಟಕ್ಕೆ ಇಂದು ವಿದಾಯ ಘೋಷಣೆ ಮಾಡಿದರು. ಜಪಾನ್ನ ಟೋಕಿಯೋದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದ ಇವರು, ಭಾರತದ ಪರ ಅನೇಕ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ಟ್ವಿಟರ್ ಮೂಲಕ ವಿದಾಯ ಘೋಷಣೆ
'ದೇಶಕ್ಕಾಗಿ ನನ್ನ ಕೈಯಿಂದಾದ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಆದರೂ ಸಂತೋಷವಾಗಿದ್ದೇನೆಂದು ಹೇಳಿದರೆ ಅದು ನಿಮ್ಮೆಲ್ಲರಿಗೂ ಸುಳ್ಳು ಹೇಳಿದಂತಾಗುತ್ತದೆ. ಒಲಿಂಪಿಕ್ಸ್ನಲ್ಲಿ ನನ್ನ ತಂಡದ ಪರ ನಾನು ಕೂಡ ವೇದಿಕೆ ಹತ್ತಬೇಕು ಎಂದು ಕನಸು ಕಂಡಿದ್ದೆ. ದುರದೃಷ್ಟವಶಾತ್ ಅದು ನೆರವೇರಲಿಲ್ಲ. ಆದರೆ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಿರುವುದು ವಿಶೇಷವಾದ ಭಾವನೆ' ಎಂದಿದ್ದಾರೆ.
'ನಾನು ತೆಗೆದುಕೊಂಡಿರುವ ನಿರ್ಧಾರ ಕೆಲವರಿಗೆ ವೈಯಕ್ತಿಕವಾಗಿ ನೋವುಂಟು ಮಾಡಿದ್ದರೂ, ಸರಿಯಾದ ನಿರ್ಧಾರ ಕೈಗೊಂಡಿದ್ದೇನೆ ಎಂಬ ಭಾವವಿದೆ' ಎಂದು ತಿಳಿಸಿದ್ದಾರೆ.
'ಅರ್ಜುನ ಪ್ರಶಸ್ತಿ' ಪುರಸ್ಕೃತ ಸುನಿಲ್, 2007ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ಇದೇ ವರ್ಷ ಪಾಕ್ ವಿರುದ್ಧ ನಡೆದ ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಂಡ ಫೈನಲ್ನಲ್ಲಿ ಗೆಲುವು ಸಾಧಿಸಿತ್ತು.
ಹಾಕಿ ತಂಡದ ಸಹಆಟಗಾರರೊಂದಿಗೆ ಕನ್ನಡಿಗ ಎಸ್.ವಿ.ಸುನಿಲ್
ಇದನ್ನೂ ಓದಿ:ರೂಪಿಂದರ್ ಬೆನ್ನಲ್ಲೇ ಮತ್ತೊಬ್ಬ ಒಲಿಂಪಿಕ್ಸ್ ಪದಕ ವಿಜೇತ ಬಿರೇಂದ್ರ ಲಕ್ರಾ ನಿವೃತ್ತಿ
ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಎರಡು ಸಲ ಪ್ರತಿನಿಧಿಸಿರುವ ಸುನಿಲ್, ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಪ್ರಮುಖವಾಗಿ ಭಾರತ 2011ರ ಏಷ್ಯನ್ ಚಾಂಪಿಯನ್ ಟ್ರೋಫಿಯಲ್ಲಿ ಚಿನ್ನ ಗೆದ್ದಿರುವ ತಂಡದ ಭಾಗವಾಗಿದ್ದರು.
ಉಳಿದಂತೆ, 2012ರ ಏಷ್ಯನ್ ಚಾಂಪಿಯನ್ ಟ್ರೋಪಿಯಲ್ಲಿ ಬೆಳ್ಳಿ, 2014ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ, 2018ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಾಗಲೂ ತಂಡದಲ್ಲಿದ್ದರು. 2016 ಹಾಗೂ 2018ರ FIH ಚಾಂಪಿಯನ್ ಟ್ರೋಪಿಯಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಎಸ್.ವಿ.ಸುನಿಲ್ ಹಾಕಿಗೆ ವಿದಾಯ ಘೋಷಣೆ ಮಾಡುತ್ತಿದ್ದಂತೆ ಇಂಡಿಯನ್ ಹಾಕಿ ಅವರಿಗೆ ಅಭಿನಂದನೆ ಸಲ್ಲಿಸಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಪ್ರತಿನಿಧಿಸಿದ್ದ ಡ್ರ್ಯಾಗ್ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಹಾಗೂ ಡಿಫೆಂಡರ್ ಬೀರೇಂದ್ರ ಲಾಕ್ರಾ ಕೂಡ ನಿನ್ನೆ ಹಾಕಿಗೆ ನಿವೃತ್ತಿ ಘೋಷಣೆ ಮಾಡಿದ್ದರು.