ಮುಂಬೈ:2021ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ಸದಸ್ಯ ಬಿರೇಂದ್ರ ಲಕ್ರಾ ಗುರುವಾರ ತಮ್ಮ ಹಾಕಿ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಡ್ರಾಗ್ ಫ್ಲಿಕರ್ ಹಾಗೂ ಡಿಫೆಂಡರ್ ರೂಪಿಂದರ್ಪಾಲ್ ಸಿಂಗ್ ನಿವೃತ್ತಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಡಿಫೆಂಡರ್ ಲಕ್ರಾ ಕೂಡ ತಮ್ಮ ಸ್ಟಿಕ್ಗೆ ವಿಶ್ರಾಂತಿ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ರೂಪಿಂದರ್ ಮತ್ತು ಬಿರೇಂದ್ರ ಇಬ್ಬರನ್ನೂ ಒಂದೆರಡು ವರ್ಷಗಳ ನಂತರ ಮತ್ತೆ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅವರಿಬ್ಬರೂ ಟೋಕಿಯೋದಲ್ಲಿ ನಾಲ್ಕು ದಶಕಗಳ ನಂತರ ಭಾರತಕ್ಕೆ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಒಲಿಂಪಿಕ್ಸ್ ಪದಕ ಗೆದ್ದ ನಂತರ ಭಾರತ ತಂಡ ಏಷ್ಯಾ ಚಾಂಪಿಯನ್ಸ್ ಟ್ರೋಪಿಯಲ್ಲಿ ಭಾಗವಹಿಸಬೇಕಿತ್ತು. ಆದರೆ ಕೋವಿಡ್ 19ನಿಂದ ಅದು ರದ್ದಾಗಿತ್ತು. ಈ ಇಬ್ಬರು ಲೆಜೆಂಡರಿ ಆಟಗಾರರು ಕ್ರೀಡೆಯಲ್ಲಿ ಸಾಧಿಸಬೇಕಾದ ಎಲ್ಲಾ ಪ್ರಮುಖ ವಿಷಯಗಳನ್ನು ಸಾಧಿಸಿದ್ದಾರೆ. ಹಾಗಾಗಿ ಭವಿಷ್ಯದಲ್ಲಿ ಯುವಕರಿಗೆ ಅವಕಾಶ ನೀಡಬೇಕೆಂಬ ಹಿತದೃಷ್ಟಿಯಿಂದ ವಿದಾಯ ಘೋಷಿಸಿದ್ದಾರೆ. ಆದರೆ ಈ ಇಬ್ಬರು ಅನುಭವಿ ಡೆಫೆಂಡರ್ಗಳ ದಿಢೀರ್ ನಿವೃತ್ತಿಯಿಂದ ಭಾರತ ತಂಡಕ್ಕೆ ಖಂಡಿತ ಅಲ್ಪ ಹಿನ್ನಡೆ ಉಂಟಾಗಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
31 ವರ್ಷದ ಲಕ್ರಾ 201 ಪಂದ್ಯಗಳನ್ನಾಡಿದ್ದಾರೆ. ಲಕ್ರಾ 2014 ಮತ್ತು 2018ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಹಾಗೂ ಕಂಚು ಗೆದ್ದ ಭಾರತ ತಂಡದ ಭಾಗವಾಗಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಕಂಚು ತಂದುಕೊಟ್ಟ ಹಾಕಿ ಆಟಗಾರ ರೂಪಿಂದರ್ ಪಾಲ್ ಸಿಂಗ್ ನಿವೃತ್ತಿ ಘೋಷಣೆ