ಕಠ್ಮಂಡು: ಭಾರತ ಅಂಡರ್ 18 ತಂಡ ಮೂರನೇ ಆವೃತ್ತಿಯ ಸೌತ್ ಏಷ್ಯನ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಬಾಂಗ್ಲದೇಶ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನೇಪಾಳದ ಕಠ್ಮಂಡುವಿನಕಲ್ಲಿ ನಡೆದ SAFF-18 ಚಾಂಪಿಯನ್ಶಿಪ್ ಫೈನಲ್ನಲ್ಲಿ ಬಾಂಗ್ಲಾದೇಶ ತಂಡವನ್ನು 2-1 ಗೋಲುಗಳಿಂದ ಮಣಿಸುವ ಮೂಲಕ ಭಾರತ ಅಂಡರ್ 18 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯಾರಂಭವಾದ ಕೇವಲ 2ನೇ ನಿಮಿಷದಲ್ಲಿ ವಿಕ್ರಮ್ ಪ್ರತಾಪ್ ಸಿಂಗ್ ಗೋಲು ಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಬಾಂಗ್ಲದೇಶ ತಂಡ ಮೊದಲಾರ್ಧದ ಕೊನೆಯಲ್ಲಿ ಯಾಸಿನ್ ಗಳಿಸಿದ ಗೋಲಿನ ನೆರವಿನಿಂದ 1-1 ರಲ್ಲಿ ಸಮಬಲ ಸಾಧಿಸಿತು.
ದ್ವಿತೀಯಾರ್ಧದ 45 ನಿಮಿಷಗಳಲ್ಲಿ ಎರಡು ತಂಡಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರಿಂದ ಗೋಲು ಗಳಿಸಲು ಆಗಲಿಲ್ಲ. ಹೆಚ್ಚುವರಿ ಸಮಯದಲ್ಲಿ ಭಾರತ ತಂಡದ ರವಿ ಬಹದ್ದೂರ್ ರಾಣಾ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡ ತನ್ನ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿಯಿತು.
8 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ 2015 ಹಾಗೂ 2017ರಲ್ಲಿ ನೇಪಾಳ ಚಾಂಪಿಯನ್ ಆಗಿತ್ತು. ಭಾರತ 2015ರಲ್ಲಿ ರನ್ನರ್ ಆಪ್ ಆದರೆ, ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2017 ಹಾಗೂ 2019ರ ಟೂರ್ನಿಯಲ್ಲಿ ಬಾಂಗ್ಲದೇಶ ರನ್ನರ್ ಆಪ್ ಸ್ಥಾನ ಅಲಂಕರಿಸಿದೆ.