ನ್ಯೂಜಿಲ್ಯಾಂಡ್:6 ಎಸೆತಗಳಲ್ಲಿ ಬೇಕಾಗಿದ್ದು 6 ರನ್.. ಇನ್ನೂ 3 ವಿಕೆಟ್ ಬಾಕಿ. ಪರಿಸ್ಥಿತಿ ಹೀಗಿದ್ದಾಗ ಸಾಮಾನ್ಯವಾಗಿ ಯಾವುದೇ ತಂಡವು ಕೂಡ ಸೋಲುವ ಕನಸು ಕಂಡಿರಲಿಕ್ಕಿಲ್ಲ. ಆದರೆ, ಬೇಓವಲ್ನಲ್ಲಿ ನಡೆದ ಮಹಿಳಾ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲ್ಯಾಂಡ್ ತಂಡ 6 ರನ್ ಗಳಿಸುವಲ್ಲಿ ವಿಫಲವಾಗಿ 3 ರನ್ಗಳ ಸೋಲು ಕಂಡಿತು. ಈ ಮೂಲಕ ವಿಶ್ವಕಪ್ನ ಮೊದಲ ಪಂದ್ಯ ರೋಚಕ ಅಂತ್ಯಕಂಡಿದೆ.
ವೆಸ್ಟ್ ಇಂಡೀಸ್ ಮತ್ತು ಆತಿಥೇಯ ನ್ಯೂಜಿಲ್ಯಾಂಡ್ ಮಧ್ಯೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆರಿಬಿಯನ್ ಮಹಿಳೆಯರು ನಿಗದಿತ 50 ಓವರ್ಗಳಲ್ಲಿ 259 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದರು. ಕೆರಿಬಿಯನ್ನರ ಸ್ಟಾರ್ ಆಲ್ರೌಂಡರ್ ಹೈಲೇ ಮ್ಯಾಥ್ಯೂಸ್(119)ಭರ್ಜರಿ ಶತಕ ಸಿಡಿಸಿದರು. ನ್ಯೂಜಿಲ್ಯಾಂಡ್ ಮಹಿಳಾ ಬೌಲರ್ಗಳ ಬೆವರಿಳಿಸಿದ ಹೈಲೇ 16 ಬೌಂಡರಿ 1 ಸಿಕ್ಸರ್ ಸಿಡಿಸಿದರು.
ಹೈಲೇಗೆ ಉತ್ತಮ ಸಾಥ್ ನೀಡಿದ ಎಸ್.ಟೈಲರ್ (30), ಚೇಡೀನ್ ನೇಷನ್(36) ರನ್ ಗಳಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃಢವಾಗಿ ನಿಂತು ಬ್ಯಾಟ್ ಬೀಸಿದರು.
ಹೋರಾಟದ ಕೊನೆಯಲ್ಲಿ ಎಡವಿದ ಬ್ಲ್ಯಾಕ್ ಕ್ಯಾಪ್ಸ್:ವೆಸ್ಟ್ ಇಂಡೀಸ್ ನೀಡಿದ 259 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ ಮಹಿಳೆಯರು 256 ರನ್ ಗಳಿಸಿ 3 ರನ್ಗಳ ಅಂತರದಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು.
ತಂಡದ ಆರಂಭಿಕ ಆಟಗಾರ್ತಿ ಸೂಝಿ ಬೇಟ್ಸ್ 3 ರನ್ ಗಳಿಸುವಷ್ಟರಲ್ಲಿಯೇ ಔಟಾಗಿ ನಿರಾಸೆ ಮೂಡಿಸಿದರು. ಈ ವೇಳೆ ತಂಡದ ಗೆಲುವಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡ ನಾಯಕಿ ಸೋಫಿ ಡೆವೈನ್(108) ಶತಕ ಬಾರಿಸಿದರು.
ಉತ್ತಮ ಸ್ಥಿತಿಯಲ್ಲಿದ್ದ ನ್ಯೂಜಿಲ್ಯಾಂಡ್ ತಂಡ ಇನ್ನೇನು ಪಂದ್ಯ ಗೆಲ್ಲಲ್ಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ನಾಯಕಿ ಸೋಫಿ ಡಿವೈನ್ ಔಟಾದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು.
ಕೈಕೊಟ್ಟ ಮಧ್ಯಮ ಕ್ರಮಾಂಕ:ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಅಮೇಲಿಯಾ ಕೆರ್, ಲೀ ತಹುಹು, ಮ್ಯಾಡಿ ಗ್ರೀನ್, ಬ್ಯೂಕ್ ಹಾಲಿಡೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇದರಿಂದ ತಂಡ ಒತ್ತಡಕ್ಕೆ ಸಿಲುಕಿತ್ತು. ಆ್ಯಮಿ ಸೆಟ್ಟರ್ಥ್ವೇಟ್ (31), ಕೇಟಿ ಮಾರ್ಟಿನ್(44) ರನ್ ಗಳಿಸಿ ತಂಡ ಮರು ಹೋರಾಟ ಮಾಡುವಂತೆ ಮಾಡಿದರು.
ಡೀಂಡ್ರ ಡೊಟ್ಟಿನ್ ಕೈಚಳಕ:ಕೊನೆಯ ಓವರ್‌ನಲ್ಲಿ 6 ರನ್ ಗಳಿಸಿ ಗೆಲ್ಲಬೇಕಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಅರೆಕಾಲಿಕ ಬೌಲರ್ ಡೀಂಡ್ರ ಡೊಟ್ಟಿನ್ ಶಾಕ್ ನೀಡಿದರು. ಮೊದಲ ಎಸೆತದಲ್ಲಿ ಒಂದು ರನ್ ನೀಡಿದರೆ, ಎರಡನೇ ಎಸೆತದಲ್ಲಿ ಕೇಟಿ ಮಾರ್ಟಿನ್ಗೆ ಪೆವಿಲಿಯನ್ ಹಾದಿ ತೋರಿಸಿದರು. 4 ನೇ ಬಾಲ್ಗೆ ಜೆಸ್ಸಿ ಕೆರ್ ವಿಕೆಟ್ ಪಡೆದು ಪಂದ್ಯ ರೋಚಕತೆ ಪಡೆಯುವಂತೆ ಮಾಡಿದರು. ಬಳಿಕ ಫ್ರಾನ್ ಜೋನಸ್ ರನೌಟ್ ಆಗುವ ಮೂಲಕ 3 ನ್ಯೂಜಿಲ್ಯಾಂಡ್ 3 ರನ್ಗಳ ಸೋಲು ಕಂಡಿತು.
ಇದನ್ನೂ ಓದಿ:ಸ್ಮರಣೀಯ ಟೆಸ್ಟ್ನಲ್ಲಿ ನಿರಾಶೆಯ ಜೊತೆಗೆ ದಾಖಲೆ ಮಾಡಿದ ಕಿಂಗ್ ಕೊಹ್ಲಿ