ಸಿಲ್ಹೆಟ್ (ಬಾಂಗ್ಲಾದೇಶ) :ಏಷ್ಯಾ ಕಪ್ ಸತತ ಮೂರು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಭಾರತ ಇಂದು ಪಾಕಿಸ್ತಾನದ ಎದುರು 13ರನ್ಗಳಿಂದ ಸೋಲನುಭವಿಸಿತು. ಭಾರತೀಯ ವನಿತೆಯರು ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡರು. ಟಾಸ್ ಗೆದ್ದು ಪಾಕಿಸ್ತಾನ ನೀಡಿದ್ದ 138 ರನ್ಗಳ ಗುರಿ ಬೆನ್ನು ಹತ್ತಿದ್ದ ಕೌರ್ ತಂಡ 124ಕ್ಕೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 13ರನ್ನಿಂದ ಸೋಲನುಭವಿಸಿತು.
ಪಾಕಿಸ್ತಾನ ನೀಡಿದ್ದ ಸಾಧಾರಣ ಗುರಿಯನ್ನು ಭೇದಿಸುವಲ್ಲಿ ಭಾರತದ ವನಿತೆಯರು ವಿಫಲರಾಗಿದ್ದಾರೆ. ಯಾವೊಬ್ಬರೂ ಆಟಗಾರ್ತಿಯೂ 30ಕ್ಕಿಂತ ಹೆಚ್ಚಿನ ರನ್ ಗಳಿಸಲಿಲ್ಲ. ಆರಂಭಿಕರಾಗಿ ಕ್ರಿಸ್ಗೆ ಬಂದ ಸಬ್ಬಿನೇನಿ ಮೇಘನಾ (15) ಮತ್ತು ಸ್ಮೃತಿ ಮಂಧಾನ(17) ಬೇಗ ವಿಕೆಟ್ ಚೆಲ್ಲಿದರು. ನಂತರ ಬಂದ ಜೆಮಿಮಾ ರಾಡ್ರಿಗಸ್(8), ಪೂಜಾ ವಸ್ತ್ರಾಕರ್(5) ಕ್ರಿಸ್ನಲ್ಲಿ ನಿಲ್ಲಲೇ ಇಲ್ಲ.
ದಯಾಲನ್ ಹೇಮಲತಾ(20) ಪಾಕಿಸ್ತಾನದ ಬೌಲರ್ಗಳಿಗೆ ದಿಟ್ಟ ಉತ್ತರ ನೀಡುತ್ತಿದ್ದರು. ಆದರೆ, ಅವರ ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. ದೀಪ್ತಿ ಶರ್ಮಾ(16), ಹರ್ಮನ್‌ಪ್ರೀತ್ ಕೌರ್(12) ಮತ್ತು ರಿಚಾ ಘೋಷ್(26) ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರಾದರೂ ಯಶಸ್ಸು ಸಾಧಿಸಲಿಲ್ಲ. ನಂತರ ಬಂದ ರಾಜೇಶ್ವರಿ ಗಾಯಕ್ವಾಡ್(3), ರಾಧಾ ಯಾದವ್(2) ಬಾಲಂಗೋಚಿಗಳಾದರು. ರೇಣುಕಾ ಸಿಂಗ್(2) ಅಜೇಯರಾಗಿ ಉಳಿದರು.
ಪಾಕಿಸ್ತಾನ ಪರ ನಶ್ರತ್ ಸನದ್ ಮೂರು ವಿಕೇಟ್ ಪಡೆದು ಮಿಂಚಿದರು. ಸಾದಿಯಾ ಇಕ್ಬಾಲ್ ಮತ್ತು ನಿದಾ ದಾರ್ ತಲಾ ಎರಡು ವಿಕೆಟ್ ಉರುಳಿಸಿದರು. ತೌಬಾ ಹಸನ್ ಮತ್ತು ಅಯ್ಮನ್ ಅನ್ವರ್ ಒಂದೊಂದು ವಿಕೆಟ್ಗೆ ಪಡೆದುಕೊಂಡರು.