ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಏಕೈಕ ಆ್ಯಶಸ್ ಟೆಸ್ಟ್ ಅನ್ನು ಆಸ್ಟ್ರೇಲಿಯಾ ವನಿತೆಯರು 89 ರನ್‌ಗಳಿಂದ ಗೆದ್ದು ಬೀಗಿದರು. ಬಹುತೇಕ ಇಂಗ್ಲೆಂಡ್ ವಶದಲ್ಲೇ ಇದ್ದ ಗೆಲುವನ್ನು ಆಸ್ಟ್ರೇಲಿಯಾ ಬೌಲರ್ ಆಶ್ಲೀಗ್ ಗಾರ್ಡ್ನರ್ ಚಾಣಾಕ್ಷತನದಿಂದ ಮರುವಶಕ್ಕೆ ಪಡೆದರು. ಗಾರ್ಡ್ನರ್ ಇಂಗ್ಲೆಂಡ್‌ನ 8 ವಿಕೆಟ್ ಕಬಳಿಸಿ ಆ್ಯಶಸ್ ಗೆಲುವಿನ ರುವಾರಿಯಾದರು. ಪ್ರಸ್ತುತ ಆಸ್ಟ್ರೇಲಿಯಾದ ವನಿತೆಯರ ತಂಡ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಇದೀಗ ಆ್ಯಶಸ್ ಅನ್ನೂ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಈ ನಾಲ್ಕು ಸ್ಪರ್ಧೆಯ ಚಾಂಪಿಯನ್ನರಾಗಿ ಕಾಂಗರೂ ನಾಡಿನ ವನಿತೆಯರ ತಂಡ ಹೊರಹೊಮ್ಮಿದೆ.
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 257 ರನ್‌ಗಳಿಗೆ ಆಲೌಟಾಯಿತು. 10 ರನ್ ಮುನ್ನಡೆಯಿಂದ ಆಸಿಸ್ ವನಿತೆಯರ ತಂಡ ಬ್ಯಾಟಿಂಗ್ ಆರಂಭಿಸಿದ್ದು ಇಂಗ್ಲೆಂಡ್ ಗೆಲುವಿಗೆ 268 ರನ್‌ಗಳ ಅವಶ್ಯಕತೆ ಇತ್ತು. ನಾಲ್ಕನೇ ದಿನವಾದ ನಿನ್ನೆ ಕೊನೆಯ ಸೆಷನ್ನಲ್ಲಿ ಇಂಗ್ಲೆಂಡ್ ಮಹಿಳೆಯರು 28 ಓವರ್ಗೆ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದ್ದರು. ಕ್ರೀಸ್ನಲ್ಲಿ ಡೇನಿಯಲ್ ವ್ಯಾಟ್ ಮತ್ತು ಕೇಟ್ ಕ್ರಾಸ್ ಇದ್ದರು. ಇಂದು ಆಸ್ಟ್ರೇಲಿಯಾಗೆ 5 ವಿಕೆಟ್ನ ಅವಶ್ಯಕತೆ ಇದ್ದರೆ, ಆಂಗ್ಲರಿಗೆ 152 ರನ್‌ಗಳು ಬೇಕಿದ್ದವು. ನಾಲ್ಕನೇ ದಿನ ಇಂಗ್ಲೆಂಡ್‌ನ 3 ವಿಕೆಟ್ಗಳನ್ನು ಕಬಳಿಸಿದ್ದ ಗಾರ್ಡ್ನರ್ ಇಂದು ಐದು ವಿಕೆಟ್ ಕಿತ್ತು ಇಂಗ್ಲೆಂಡ್ಗೆ ಮುಳುವಾದರು.
ಡೇನಿಯಲ್ ವ್ಯಾಟ್ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿದರು. ಆದರೆ ಇನ್ನೊಂದು ಬದಿಯಲ್ಲಿ ವಿಕೆಟ್ ಉರುಳಿದ ಕಾರಣ ತಂಡವನ್ನು ವಿಜಯದ ಹೊಸ್ತಿಲಿಗೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾದರು. ಇಂದು ಇಂಗ್ಲೆಂಡ್ ತಂಡ 62 ರನ್ ಕಲೆಹಾಕುವಷ್ಟರಲ್ಲಿ ಆಲೌಟ್ ಆಯಿತು. ಡೇನಿಯಲ್ ವ್ಯಾಟ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಬೇರಾರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ ದ್ವಿಶತಕ ಗಳಿಸಿದ್ದ ಟಮ್ಮಿ ಬ್ಯೂಮಾಂಟ್ 28 ರನ್ ಗಳಿಸಿದ್ದು ಎರಡನೇ ಹೆಚ್ಚಿನ ರನ್ ಆಗಿದೆ. ಮತ್ತೆಲ್ಲ ಆಟಗಾರ್ತಿಯರು ಹತ್ತು ರನ್ ಗಡಿ ದಾಟಿಸಲು ಪರದಾಡಿದರು. ಇಂದು ಕೇವಲ 20 ಓವರ್ ಆಡುವಷ್ಟರಲ್ಲಿ ಇಂಗ್ಲೆಂಡ್ 178ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು.