ಹೈದರಾಬಾದ್ (ತೆಲಂಗಾಣ): 2019ರಲ್ಲಿ ಹೆಚ್ಚು ಬೌಂಡರಿ ಮತ್ತು ಸಿಕ್ಸರ್ ಲೆಕ್ಕಾಚಾರದಿಂದ ನ್ಯೂಜಿಲೆಂಡ್ ಮಣಿಸಿ ಇಂಗ್ಲೆಂಡ್ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. 2023ರಲ್ಲಿ ಹೆಚ್ಚೂ ಕಡಿಮೆ ಅದೇ ತಂಡದೊಂದಿಗೆ ಭಾರತ ಪ್ರವಾಸ ಮಾಡಿರುವ ಇಂಗ್ಲೆಂಡ್ ಯಶಸ್ಸು ಗಳಿಸುವಲ್ಲಿ ಎಡವುತ್ತಿದೆ. ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ 4 ಪಂದ್ಯಗಳ ಪೈಕಿ ಬಾಂಗ್ಲಾದೇಶದ ವಿರುದ್ಧ ಮಾತ್ರ ಜಯ ದಾಖಲಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಸೋತಿದೆ. ಇದರ ಪರಿಣಾಮ, ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ.
ವಿಶ್ವಕಪ್ ಆರಂಭಕ್ಕೂ ಮುನ್ನ ಕಪ್ ಗೆಲ್ಲುವ ಬಲಿಷ್ಠ ತಂಡದಲ್ಲಿ ಒಂದೆಂದು ಕರೆಸಿಕೊಳ್ಳುತ್ತಿದ್ದ ಆಂಗ್ಲರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನೀರಸ ಪ್ರದರ್ಶನ ತೋರುತ್ತಿದ್ದಾರೆ. ದುರ್ಬಲ ತಂಡಗಳ ವಿರುದ್ಧವೂ ಸುಲಭವಾಗಿ ಮಂಡಿಯೂರಿದೆ. ಹೀಗಾಗಿ ಪ್ಲೇ ಆಫ್ಗೆ ಪ್ರವೇಶ ಪಡೆಯುವುದು ಹಾಲಿ ಚಾಂಪಿಯನ್ಗೆ ಕಠಿಣವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ 229 ರನ್ಗಳಿಂದ ಸೋಲು ಕಂಡ ನಂತರ ನಾಯಕ ಬಟ್ಲರ್, "ಇನ್ನುಳಿದ ಐದು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡ ನಮ್ಮ ಮೇಲಿದೆ" ಎಂದಿದ್ದಾರೆ. ಆದರೆ, ಐದು ಪಂದ್ಯವನ್ನು ಇಂಗ್ಲೆಂಡ್ ಸಾಧಾರಣವಾಗಿ ಗೆದ್ದರೆ ಯಾವುದೇ ಪ್ರಯೋಜನ ಆಗದು. ಉತ್ತಮ ರನ್ರೇಟ್ನ ಗೆಲುವು ಅಗತ್ಯವಿದೆ.
ಅಹಮದಾಬಾದ್ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 282 ರನ್ ಕಲೆಹಾಕಿತ್ತು. ಜೋ ರೂಟ್ (77) ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ನಾಯಕ ಜೋಸ್ ಬಟ್ಲರ್ 43 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಈ ಗುರಿಯನ್ನು ಎದುರಾಳಿ ನ್ಯೂಜಿಲೆಂಡ್ 13 ಓವರ್ ಮತ್ತು 9 ವಿಕೆಟ್ ಉಳಿಸಿಕೊಂಡೇ ಗೆದ್ದು ಬೀಗಿತ್ತು.
ಎರಡನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಿದ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಡೇವಿಡ್ ಮಲನ್, ಜಾನಿ ಬೈರ್ಸ್ಟೋವ್ ಮತ್ತು ಜೋ ರೂಟ್ ಅವರ ಇನ್ನಿಂಗ್ಸ್ ಬಲದಿಂದ 364 ರನ್ ಗಳಿಸಿತ್ತು. ಆದರೆ 307 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡ ನಂತರ 57 ರನ್ ಕಲೆಹಾಕುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಬ್ಯಾಟಿಂಗ್ ರೀತಿಯಲ್ಲೇ ಬೌಲಿಂಗ್ನಲ್ಲೂ ಸಾಧಾರಣ ಪ್ರದರ್ಶನ ನೀಡಿದ ಆಂಗ್ಲರು 137 ರನ್‌ಗಳ ಗೆಲುವು ದಾಖಲಿಸಿದ್ದರು. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಫ್ಘಾನಿಸ್ತಾನ ನೀಡಿದ್ದ 284 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತುವಲ್ಲಿ ಇಂಗ್ಲೆಂಡ್ ವಿಫಲವಾಗಿತ್ತು. ಹ್ಯಾರಿ ಬ್ರೂಕ್ 66 ರನ್‌ಗಳ ಇನ್ನಿಂಗ್ಸ್ ಆಡಿದ್ದು ಬಿಟ್ಟರೆ ಮತ್ತಾವ ಬ್ಯಾಟರ್ ಕೂಡಾ ದೊಡ್ಡ ಇನ್ನಿಂಗ್ಸ್ ಆಡಿರಲಿಲ್ಲ.
ಅಕ್ಟೋಬರ್ 21ರ ಶನಿವಾರ ಮುಂಬೈನಲ್ಲಿ ಹಾಲಿ ಚಾಂಪಿಯನ್ಗಳು ಬೌಲಿಂಗ್ನಲ್ಲಿ ಧಾರಾಳವಾದರೆ, ಬ್ಯಾಟಿಂಗ್ನಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿದರು. ಇಂಗ್ಲೆಂಡ್ನ 6 ಬೌಲರ್ಗಳು 5ಕ್ಕೂ ಹೆಚ್ಚಿನ ಎಕಾನಮಿಯಲ್ಲಿ ಬೌಲಿಂಗ್ ಮಾಡಿದರೆ, ಅದರಲ್ಲಿ ಇಬ್ಬರು 10 ಎಕಾನಮಿಯಲ್ಲಿ ಕಳಪೆ ಬೌಲಿಂಗ್ ಪ್ರದರ್ಶಿಸಿ 400 ರನ್ ಗುರಿ ಪಡೆದಿದ್ದರು. ಇದನ್ನು ಬೆನ್ನತ್ತಿದ ತಂಡ 17 ಓವರ್ಗೆ 100 ರನ್ಗೆ 8 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಇಬ್ಬರು ಬೌಲರ್ಗಳು 70 ರನ್‌ಗಳ ಜತೆಯಾಟ ಮಾಡಿದ್ದಕ್ಕೆ ತಂಡ 170 ರನ್ ಗಳಿಸಿತು.