ಫ್ಲೋರಿಡಾ (ಅಮೆರಿಕಾ):ಸರಣಿ ಸಮಬಲಕ್ಕಾಗಿ ಎದುರು ನೋಡುತ್ತಿರುವ ಭಾರತ ತಂಡ ಟಾಸ್ ಸೋತಿದ್ದು, ಮೊದಲು ಬೌಲಿಂಗ್ ಮಾಡಬೇಕಿದೆ. ವೆಸ್ಟ್ ಇಂಡೀಸ್ ಸಿರೀಸ್ ವಶಕ್ಕಾಗಿ ಒಂದು ಗೆಲುವನ್ನು ಎದುರು ನೋಡುತ್ತಿದೆ. ಭಾರತ ಮೂರನೇ ಪಂದ್ಯದ ತಂಡದಲ್ಲೇ ಮುಂದುವರೆದಿದೆ.
ವೆಸ್ಟ್ ಇಂಡೀಸ್ ತಂಡ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಜೇಸನ್ ಹೋಲ್ಡರ್, ಶಾಯ್ ಹೋಪ್ ಮತ್ತು ಓಡಿಯನ್ ಸ್ಮಿತ್ ತಂಡಕ್ಕೆ ಸೇರಿಕೊಂಡಿದ್ದಾರೆ. ಜಾನ್ಸನ್ ಚಾರ್ಲ್ಸ್ ಮತ್ತು ರೋಸ್ಟನ್ ಚೇಸ್ ತಂಡದಿಂದ ಹೊರಗುಳಿದ್ದಾರೆ.
ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಭಾರತ ಉತ್ತಮ ರೆಕಾರ್ಡ್ ಹೊಂದಿದೆ. ಇಲ್ಲಿ ಆಡಿದ ಆರು ಪಂದ್ಯದಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದರೆ, 1ರಲ್ಲಿ ಸೋತು ಒಂದು ರದ್ಧಾಗಿದೆ. ವೆಸ್ಟ್ ಇಂಡೀಸ್ ಇದೇ ಆಡಿರುವ ಒಟ್ಟಾರೆ 9 ಪಂದ್ಯದಲ್ಲಿ 3ರಲ್ಲಿ ಮಾತ್ರ ಗೆಲುವು ಕಂಡಿದೆ.
ಪಿಚ್ ಹೇಗಿದೆ?: ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಸುಲಭ ಎಂದು ಹೇಳಲಾಗುತ್ತದೆ. ಈ ಮೈದಾನದಲ್ಲಿ ಆಡಿದ ಕಳೆದ ನಾಲ್ಕು ಪಂದ್ಯಗಳಲ್ಲಿ ಮೊದಲ ಇನಿಂಗ್ಸ್‌ನಲ್ಲಿ 170ಕ್ಕೂ ಹೆಚ್ಚು ರನ್‌ಗಳ ಸ್ಕೋರ್ ಕಂಡಿದೆ. 2022ರಲ್ಲಿ ಇದೇ ಮೈದಾನದಲ್ಲಿ ಕೊನೆಯ ಬಾರಿಗೆ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾದಾಗ ಭಾರತ ಮೊದಲ ಇನಿಂಗ್ಸ್‌ನಲ್ಲಿ 188 ರನ್ ಗಳಿಸಿ ವೆಸ್ಟ್ ಇಂಡೀಸ್ ಅನ್ನು 100 ರನ್‌ಗಳಿಗೆ ಆಲೌಟ್ ಮಾಡಿತ್ತು.