ಮೆಲ್ಬರ್ನ್ (ಆಸ್ಟ್ರೇಲಿಯಾ):ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ದಾಖಲೆಗಳ ಪಟ್ಟಿಗೆ ಮಗದೊಂದು ಗರಿ ಮೂಡಿದೆ. ಪಾಕಿಸ್ತಾನ ತಂಡದ ವಿರುದ್ಧ ಭಾನುವಾರ ಗಮನಾರ್ಹ ಬ್ಯಾಟಿಂಗ್ ಪ್ರದರ್ಶಿಸಿದ ರನ್ ಮಷಿನ್, ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿಯೇ 6ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊಸ ದಾಖಲೆ ಬರೆದರು.
ಪ್ರಸ್ತುತ ಐಸಿಸಿ ಟಿ20 ವಿಶ್ವಕಪ್ ನಡೆಯುತ್ತಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ರನ್ ಹೊಳೆ ಹರಿಸಿದ ಅವರು ಟೀಂ ಇಂಡಿಯಾದ ಗೆಲುವಿನ ರುವಾರಿಯಾಗಿದ್ದರು. 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಅಜೇಯ 82 ರನ್ ಗಳಿಸಿದ ಕೊಹ್ಲಿ, ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
53.80ರ ಸರಾಸರಿಯಲ್ಲಿ 528 ಪಂದ್ಯಗಳನ್ನು ಎದುರಿಸಿರುವ ಕೊಹ್ಲಿ ಈವರೆಗೆ 24,212 ರನ್‌ಗಳನ್ನು ಕಲೆ ಹಾಕಿದ್ದಾರೆ. 71 ಶತಕ ಮತ್ತು 126 ಅರ್ಧ ಶತಕಗಳು ಅವರ ಬ್ಯಾಟ್‌ನಿಂದ ಹರಿದುಬಂದಿವೆ. 254* ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಸದ್ಯ ಕೊಹ್ಲಿ ಆಕ್ರಮಣಕಾರಿ ಆಟದಿಂದ ದ್ರಾವಿಡ್ ಜಾಗತಿಕ ಕ್ರಿಕೆಟ್ ಪಟ್ಟಿಯಲ್ಲಿ ಹೆಚ್ಚು ರನ್ ಗಳಿಸಿದವರಲ್ಲಿ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ.