ಧರ್ಮಶಾಲಾ(ಹಿಮಾಚಲ ಪ್ರದೇಶ): ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಎಕ್ಸ್ನಲ್ಲಿ ಸುಖು ಅವರು ವಿರಾಟ್ ಕೊಹ್ಲಿ ಜೊತೆ ಮಾತುಕತೆ ನಡೆಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಿಎಂ ಸುಖು ಎಕ್ಸ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರನ್ನು ಧರ್ಮಶಾಲಾದಲ್ಲಿ ಭೇಟಿ ಮಾಡಿದೆ. ಈ ವೇಳೆ ಕ್ರಿಕೆಟ್ ಬಗ್ಗೆ ಚರ್ಚೆ ನಡೆಸಿದೆವು. ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಅವರಿಗೆ ಅಭಿನಂದನೆಗಳು. ಈ ಸಂಬಂಧ ರಾಜ್ಯದ ಜನರ ಪರವಾಗಿ ಭಾರತದ ವಿಶ್ವಕಪ್ ಗೆಲುವಿನ ಅಭಿಯಾನಕ್ಕೆ ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ನಾಯಕರಾದ ರಾಜೀವ್ ಶುಕ್ಲಾ, ತೇಜಿಂದರ್ ಬಿಟ್ಟು,ಧರ್ಮಶಾಲಾ ಶಾಸಕ ಸುಧೀರ್ ಶರ್ಮಾ, ಸಿಎಂ ರಾಜಕೀಯ ಸಲಹೆಗಾರ ಸುನಿಲ್ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿನ್ಮಯಾನಂದ ಆಶ್ರಮಕ್ಕೆ ಭೇಟಿ ನೀಡಿದ ಕೊಹ್ಲಿ : ಕಳೆದ ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಎರಡು ದಿನಗಳ ಬಿಡುವಿನಲ್ಲಿ ಭಾರತ ತಂಡದ ಆಟಗಾರರು ಧರ್ಮಶಾಲಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಸಿದ್ಭಾದಿಯಲ್ಲಿರುವ ಸ್ವಾಮಿ ಚಿನ್ಮಯಾನಂದರ ಚಿನ್ಮಯ್ ತಪೋವನ್ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಕೊಹ್ಲಿ ಆಶ್ರಮದಲ್ಲಿ ಕೆಲಕಾಲ ಕಳೆದರು. ಸಿಧ್ಬರಿಯನ್ನು ಸಿದ್ಧರ ತಪೋವನ ಎಂದು ಪರಿಗಣಿಸಲಾಗಿದೆ. ಇಲ್ಲಿಯೇ ಚಿನ್ಮಯಾನಂದರ ಆಶ್ರಮವಿದೆ. ಈ ಆಶ್ರಮದಲ್ಲಿ ಭಗವದ್ಗೀತೆಯನ್ನು ಕಲಿಸಿಕೊಡಲಾಗುತ್ತದೆ. ಈ ಆಶ್ರಮದಿಂದ ಧವಳಧರ್ ಪರ್ವತದ ಸುಂದರ ನೋಟ ಕಾಣಸಿಗುತ್ತದೆ.