ಹೈದರಾಬಾದ್:ಕ್ರಿಕೆಟ್ ಜಗತ್ತು ಕಂಡಿರುವ ಯಶಸ್ವಿ ಕ್ರಿಕೆಟ್ ನಾಯಕರಲ್ಲಿ ಒಬ್ಬರಾಗಿರುವ ಡೆಲ್ಲಿ ಡ್ಯಾಶರ್ ಖ್ಯಾತಿಯ ವಿರಾಟ್ ಕೊಹ್ಲಿ ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ತಾವು ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ನಲ್ಲಿ ಭಾವನಾತ್ಮಕ ಪತ್ರ ಬರೆದಿರುವ ರನ್ ಮಷಿನ್ ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ.
'ಇಷ್ಟು ದೀರ್ಘಾವಧಿವರೆಗೆ ನನ್ನ ದೇಶವನ್ನ ಮುನ್ನಡೆಸಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅದಕ್ಕಿಂತಲೂ ಮುಖ್ಯವಾಗಿ ಆರಂಭದ ದಿನದಿಂದಲೂ ತಂಡದ ಹಿತದೃಷ್ಟಿಯಿಂದ ಎಂತಹ ಪರಿಸ್ಥಿತಿಯಲ್ಲೂ ನನ್ನ ಕೈ ಬಿಡದ ಆಟಗಾರರಿಗೆ ಧನ್ಯವಾದಗಳು' ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಬರೆದ ಪತ್ರದಲ್ಲಿ ಏನಿದೆ ಓದಿ..
ಕಳೆದ ಏಳು ವರ್ಷಗಳ ಕಠಿಣ ಪರಿಶ್ರಮದಿಂದಾಗಿ ತಂಡವನ್ನ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯವಾಯಿತು. ನನ್ನ ಕೆಲಸವನ್ನ ಸಂಪೂರ್ಣವಾಗಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ನನಗೆ ನೀಡಿದ್ದ ಜವಾಬ್ದಾರಿಯಲ್ಲಿ ಯಾವುದೇ ರೀತಿಯ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿದ್ದೇನೆ. ಆದರೆ, ಪ್ರತಿವೊಂದು ವಿಷಯ ಕೂಡ ಒಂದು ಹಂತದಲ್ಲಿ ಕೊನೆಗೊಳ್ಳಬೇಕು. ಇದೀಗ ಭಾರತ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಕೊನೆಗೊಳ್ಳಬೇಕಾಗಿದೆ.
ವಿರಾಟ್ ಕೊಹ್ಲಿ ಬರೆದ ಭಾವನಾತ್ಮಕ ಪತ್ರ... ನನ್ನ ಪ್ರಯಾಣದಲ್ಲಿ ಅನೇಕ ರೀತಿಯ ಏರಿಳಿತಗಳಿವೆ. ಆದರೆ, ತಂಡದಲ್ಲಿ ಎಂದಿಗೂ ಪ್ರಯತ್ನದ ಕೊರತೆ ಅಥವಾ ನಂಬಿಕೆಯ ಕೊರತೆ ಇರಲಿಲ್ಲ. ಪ್ರತಿ ಕೆಲಸದಲ್ಲೂ ಶೇ. 120ರಷ್ಟು ಶ್ರಮ ವಹಿಸಿದ್ದೇನೆ. ಇದರ ಬಗ್ಗೆ ನನಗೆ ಸಂಪೂರ್ಣವಾದ ಸ್ಪಷ್ಟತೆ ಇದೆ. ನನ್ನ ತಂಡಕ್ಕೆ ನಾನು ಅಪ್ರಾಮಾಣಿಕನಾಗಿರಲು ಸಾಧ್ಯವಿಲ್ಲ. ಇಷ್ಟೊಂದು ಸುದೀರ್ಘ ಅವಧಿಗೆ ನನ್ನ ದೇಶ ಮುನ್ನಡೆಸಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದಗಳು. ಯಾವುದೇ ಪರಿಸ್ಥಿತಿಯಲ್ಲೂ ತಂಡವನ್ನ ಬಿಟ್ಟುಕೊಡದ ಎಲ್ಲ ಸಹ ಆಟಗಾರರಿಗೆ ಥ್ಯಾಂಕ್ಸ್.
ಕೊನೆಯದಾಗಿ, ನಾಯಕನಾಗಿ ನನ್ನನ್ನು ನಂಬಿದ, ಭಾರತೀಯ ಕ್ರಿಕೆಟ್ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬಲ್ಲ ವ್ಯಕ್ತಿ ಎಂದುಕೊಂಡ ಧೋನಿಗೆ ದೊಡ್ಡ ಧನ್ಯವಾದ. ನಾಯಕನ ಜವಾಬ್ದಾರಿ ನಿರ್ವಹಿಸಲು ಅನುವು ಮಾಡಿಕೊಟ್ಟಿರುಚವ ಬಿಸಿಸಿಐ ಹಾಗೂ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.