ಕ್ರೀಡೆ ಎಂದು ಬಂದಾಗ ಸೋಲು-ಗೆಲುವು ಇದ್ದೇ ಇರುತ್ತದೆ. ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಅಗತ್ಯ ಇದೆ. ಇದನ್ನು ಹೇಳಲು ಕೇಳಲು ಚಂದ. ಆದರೆ ಆಟ ಎಂದು ಬಂದಾಗ ಗೆಲುವಿಗಾಗಿ ರೋಮದ ಅಂಚು ಕೂಡ ಹೋರಾಟಕ್ಕೆ ನಿಂತಿರುತ್ತದೆ. ಗೆಲುವಿಗಾಗಿ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲು ಪ್ರಯತ್ನಗಳನ್ನು ನಡೆಸಲಾಗುತ್ತದೆ. ಆದರೆ ಇದು ಕ್ರೀಡಾ ಸ್ಫೂರ್ತಿ ಎಂಬ ನೆಲೆಯನ್ನು ಇಟ್ಟು ನೋಡಿದಾಗ ಉತ್ತಮವಾಗಿ ಕಂಡು ಬರುವುದಿಲ್ಲ. ಇದೇ ರೀತಿಯ ಘಟನೆ ನಿನ್ನೆ ನಡೆದ ದುಲೀಪ್ ಟ್ರೋಫಿಯಲ್ಲಿ ಆಗಿದೆ.
ದಕ್ಷಿಣ ವಲಯ ಮತ್ತು ಉತ್ತರ ವಲಯದ ನಡುವಿನ ದುಲೀಪ್ ಟ್ರೋಫಿ ಸೆಮಿಫೈನಲ್ 5.5 ಓವರ್ ಮಾಡಲು ಬರೋಬ್ಬರಿ 1 ಗಂಟೆ ಕಾಲ ತೆಗೆದುಕೊಳ್ಳಲಾಗಿದೆ. ಪಂದ್ಯದ ಗೆಲುವಿಗಾಗಿ ಉತ್ತರ ವಲಯದ ನಾಯಕ ಜಯಂತ್ ಯಾದವ್ ಈ ರೀತಿಯ ಟ್ರಕ್ನ್ನು ಬಳಸಿದರು. ಆದರೆ ಇದು ಅವರಿಗೆ ಯಶಸ್ವಿ ಮಾರ್ಗವಾಗಲಿಲ್ಲ. ಅಲ್ಲದೇ ಇದು ಈಗ ಕ್ರಿಕೆಟ್ ಪ್ರೇಮಿಗಳಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಈ ರೀತಿ ಆಟವನ್ನು ಆಡಿದರೆ ಕ್ರೀಡಾ ಸ್ಫೂರ್ತಿ ಎಂಬುದು ಎಲ್ಲಿ ಇರುತ್ತದೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಉತ್ತರ ವಲಯದ ಈ ಪ್ಲಾನ್ ನಡುವೆಯೂ ದಕ್ಷಿಣ ವಲಯ 2 ವಿಕೆಟ್ಗಳಿಂದ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸಿದೆ. ಉತ್ತರ ವಲಯ ಪಂದ್ಯವನ್ನು ಗೆಲ್ಲದೆ ಡ್ರಾ ಮಾಡಿಕೊಂಡಲ್ಲಿ ಫೈನಲ್ ಪ್ರವೇಶ ಪಡೆದುಕೊಳ್ಳುತ್ತಿತ್ತು. ಹೀಗಾಗಿ ಪಂದ್ಯವನ್ನು ಡ್ರಾ ಮಾಡಲು 'ಸ್ಪಿರಿಟ್ ಆಫ್ ಕ್ರಿಕೆಟ್' ಅನ್ನು ಬಿಟ್ಟು ಕಾಲ ಹರಣಕ್ಕೆ ಜಯಂತ್ ಯಾದವ್ ಮುಂದಾದರು. ಈಗ ಚರ್ಚೆಗೆ ಗ್ರಾಸವಾಗುತ್ತಿರುವುದು ಕೇವಲ ಅವರು ತಡ ಮಾಡಿದ್ದು ಮಾತ್ರ ಅಲ್ಲ. ಪಂದ್ಯ ಮುಗಿದ ನಂತರ ದಕ್ಷಿಣದ ನಾಯಕ ಹನುಮ ವಿಹಾರಿ ಆ ಸ್ಥಾನದಲ್ಲಿ ನಾವು ಇದ್ದಿದ್ದರೂ ಗೆಲುವಿಗಾಗಿ ಇಂತಹ ಪ್ರಯತ್ನ ಮಾಡುತ್ತಿದ್ದೆವು ಎಂದಿರುವುದು. ಈ ಮಾತಿನ ನಂತರ ಹಾಗಾದರೆ 'ಸ್ಪಿರಿಟ್ ಆಫ್ ಕ್ರಿಕೆಟ್' ಎಲ್ಲಿ ಎಂದು ಹಲವರು ಪ್ರಶ್ನಿಸಿದ್ದಾರೆ.