ಮುಂಬೈ (ಮಹಾರಾಷ್ಟ್ರ): ವಿಶ್ವಕಪ್ 2023ರ ಏಳನೇ ಪಂದ್ಯ ಆಡಲು ಭಾರತ ತಂಡ ಸೋಮವಾರ ಮುಂಬೈ ತಲುಪಿದೆ. ಭಾರತದ ಮುಂದಿನ ಪಂದ್ಯ ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ ನಡೆಯಲಿದೆ. ಪ್ರಸ್ತುತ ಐಸಿಸಿ ವಿಶ್ವಕಪ್ನಲ್ಲಿ ಭಾರತವು 12 ಅಂಕಗಳೊಂದಿಗೆ ಟೇಬಲ್‌ನ ಅಗ್ರಸ್ಥಾನದಲ್ಲಿದೆ. ಟೀಮ್ ಇಂಡಿಯಾ ಸೆಮೀಸ್ಗೆ ಪ್ರವೇಶ ಪ್ರವೇಶ ಪಡೆದಿರುವುದರಿಂದ ಆಟಗಾರರು ಸ್ವಲ್ಪ ರಿಲ್ಯಾಕ್ಸ್ ಮೂಡ್ಗೆ ಬಂದಿದ್ದಾರೆ.
ಶ್ರೀಲಂಕಾ ವಿರುದ್ಧ ತಂಡ ಮೈದಾನಕ್ಕಿಳಿಯುವ ಮೊದಲು ಲೋಕಲ್ ಬಾಯ್ ಸೂರ್ಯಕುಮಾರ್ ಯಾದವ್ ಜನರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಮುಂಬೈನ ಮರೈನ್ ಡ್ರೈವ್ನ ಸುತ್ತ ಇರುವ ಕ್ರಿಕೆಟ್ ಅಭಿಮಾನಿಗಳ ಜೊತೆ ಸಂದರ್ಶನ ಮಾಡಲು ಸೂರ್ಯ ಮಾರು ವೇಷದಲ್ಲಿ ತೆರಳಿದ್ದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಆ್ಯಪ್ ಖಾತೆಯಲ್ಲಿ ಹಂಚಿಕೊಂಡಿದೆ. ಟೀಮ್ ಇಂಡಿಯಾದ ಆಟಗಾರರ ಮೇಲೆ ಜನರಿಗಿರುವ ನಿರೀಕ್ಷೆಯನ್ನು ಸೂರ್ಯ ಕ್ಯಾಮೆರಾ ಮೆನ್ ಆಗಿ ಸೆರೆಹಿಡಿದಿದ್ದಾರೆ.
ಮೈದಾನದಲ್ಲಿ ಸೂರ್ಯಕುಮಾರ್ ಯಾದವ್ ಸಿಕ್ಸರ್ ಮತ್ತು ಬೌಂಡರಿ ಬಾರಿಸುವುದನ್ನು ನಾವು ನೋಡಿದ್ದೇವೆ. ಆದರೆ, ಇಂದು ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ವ್ಲಾಗ್ ಮಾಡಲು ಮರೈನ್ ಡ್ರೈವ್‌ಗೆ ಹೋಗಿದ್ದಾರೆ. ಈ ಸಮಯದಲ್ಲಿ ಸ್ಕೈ ತಮ್ಮ ಸಂಪೂರ್ಣ ಗುರುತನ್ನು ಬದಲಾಯಿಸಿಕೊಂಡಿದ್ದು, ಸಾಮಾನ್ಯರಂತೆ ತೆರಳಿದ್ದಾರೆ. ಟ್ಯಾಟೂವನ್ನು ಮರೆಮಾಡಲು, ಅವರು ಪೂರ್ಣ ತೋಳಿನ ಶರ್ಟ್, ಮಾಸ್ಕ್, ಕಪ್ಪು ಕನ್ನಡಕ ಮತ್ತು ಕ್ಯಾಪ್ ಧರಿಸಿದ್ದಾರೆ. ಈ ರೀತಿ ವೇಷ ಬದಲಿಸಿಕೊಂಡು ಕೊಠಡಿಯಿಂದ ಹೊರಗೆ ಬಂದಾಗ ರವೀಂದ್ರ ಜಡೇಜಾ ಕೂಡ ಸೂರ್ಯ ಅವರನ್ನು ಗುರುತಿಸಿಲ್ಲ.