ಚಿತ್ತಗಾಂಗ್:ಮೊದಲ ಟೆಸ್ಟ್ನ ಎರಡನೇ ದಿನ ಭಾರತದ ಬೌಲರ್ಗಳು ಕರಾರುವಾಕ್ ದಾಳಿ ಮೂಲಕ ಬಾಂಗ್ಲಾ ಬ್ಯಾಟರ್ಗಳನ್ನು ಕಾಡಿದರು. ಇದೇ ವೇಳೆ ದಿನದ ಎರಡನೇ ಅವಧಿಯಲ್ಲಿ ವೇಗಿ ಮೊಹಮದ್ ಸಿರಾಜ್ ಮತ್ತು ಬಾಂಗ್ಲಾದೇಶದ ಬ್ಯಾಟರ್ ಲಿಟ್ಟನ್ ದಾಸ್ ನಡುವೆ ಕೆಲಕಾಲ ಸ್ಲೆಡ್ಜಿಂಗ್, ಚಕಮಕಿ ನಡೆಯಿತು.
ಬಾಂಗ್ಲಾದೇಶದ ಇನ್ನಿಂಗ್ಸ್ನ 14 ಓವರ್ನ ಮೊದಲ ಎಸೆತದ ಬಳಿಕ ಉಭಯ ತಂಡದ ಇಬ್ಬರೂ ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಸಿರಾಜ್ ತಮ್ಮ ಫಾಲೋ ಥ್ರೂನಲ್ಲಿ, ಲಿಟ್ಟನ್ರತ್ತ ನೋಡುತ್ತ ಏನೋ ಹೇಳಿದರು. ಇದಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸಾಥ್ ನೀಡಿದಂತಿತ್ತು. ಇದಕ್ಕೆ ಪ್ರತ್ಯತ್ತರವಾಗಿ ಲಿಟ್ಟನ್ ಕೂಡ ಕೈಯನ್ನು ಕಿವಿಗಳತ್ತ ಇಟ್ಟು 'ನೀನು ಏನು ಹೇಳಿದೆ?' ಎನ್ನುತ್ತ ಸಿರಾಜ್ರತ್ತ ಬಂದರು. ಈ ವೇಳೆ, ಮಧ್ಯ ಪ್ರವೇಶಿಸಿದ ಅಂಪೈರ್ ಇಬ್ಬರನ್ನೂ ತಡೆದು ಸಮಾಧಾನಪಡಿಸಿದರು.
ಆದರೆ, ಮುಂದಿನ ಎಸೆತದಲ್ಲೇ ಸಿರಾಜ್, ಲಿಟ್ಟನ್ ದಾಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಸಂಭ್ರಮಿಸಿದರು. ಚೆಂಡು ಲಿಟ್ಟನ್‌ರ ಬ್ಯಾಟ್‌ನ ಕೆಳಗಿನ ಅಂಚಿಗೆ ಬಡಿದು ಸ್ಟಂಪ್‌ಗೆ ಅಪ್ಪಳಿಸಿತು. ಸಿರಾಜ್ ತಮ್ಮ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಿಸಿದರು. ಇದೇ ವೇಳೆ, ವಿರಾಟ್ ಕೊಹ್ಲಿ ಹಾಗೂ ಸಿರಾಜ್ ಕಿವಿಗಳತ್ತ ಕೈಯಿಟ್ಟು ಲಿಟ್ಟನ್ ಅವರನ್ನು ಅಣುಕಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದಕ್ಕೂ ಮುನ್ನ 2ನೇ ದಿನ 404 ರನ್ಗಳಿಗೆ ಭಾರತದ ಇನ್ನಿಂಗ್ಸ್ಗೆ ತೆರೆಬಿದ್ದಿತು. ಅಯ್ಯರ್ 86 ರನ್ಗಳಿಗೆ ಪೆವಿಲಿಯನ್ಗೆ ಮರಳಿದರೆ, ರವಿಚಂದ್ರನ್ ಅಶ್ವಿನ್ ಅರ್ಧಶತಕ(58) ಹಾಗೂ ಕುಲದೀಪ್ ಯಾದವ್ 40 ರನ್ ಕಾಣಿಕೆ ನೀಡಿದರು. ಬಳಿಕ ಬಿಗುವಿನ ದಾಳಿ ನಡೆಸಿದ ಟೀಂ ಇಂಡಿಯಾ 8 ವಿಕೆಟ್ ಉರುಳಿಸಿದ್ದು, ಬಾಂಗ್ಲಾದೇಶವು 133 ಮಾತ್ರ ಗಳಿಸಿದೆ. ಭಾರತವು ಇನ್ನೂ 271 ರನ್ಗಳ ಮುನ್ನಡೆಯಲ್ಲಿದೆ.
ಇದನ್ನೂ ಓದಿ:Ind Vs Ban 1st Test: ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ; ಮುಗ್ಗರಿಸಿದ ಬಾಂಗ್ಲಾ