ನಾಗ್ಪುರ:ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಭಾರತ ತಂಡ ಎರಡನೇ ಹಣಾಹಣಿಯಲ್ಲಿ ಗೆದ್ದು ಆಸೀಸ್ಗೆ ತಿರುಗೇಟು ನೀಡಿದೆ. ಸರಣಿ 1-1ರಲ್ಲಿ ಸಮಬಲ ಕಂಡಿದ್ದು, ಅಂತಿಮ ಹೋರಾಟ ಕುತೂಹಲ ಮೂಡಿಸಿದೆ. ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ ನಾಯಕ ರೋಹಿತ್ ಶರ್ಮಾ ವಿಶ್ವದಾಖಲೆ ಬರೆದಿದ್ದಾರೆ.
ಶುಕ್ರವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್‌ನಿಂದ ಭಾರತವು ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತು. ಮಳೆಯಿಂದ 8 ಓವರ್ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ ತಂಡದ ನಾಯಕ ಕೇವಲ 20 ಎಸೆತಗಳಲ್ಲಿ ಅಜೇಯ 46 ರನ್ ಬಾರಿಸಿದರು. ಅಜೇಯ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ತಲಾ ನಾಲ್ಕು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸಿದ ಹಿಟ್ಮ್ಯಾನ್ ಅಂತಾರಾಷ್ಟ್ರೀಯ T20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದರು. ಕಿವೀಸ್ನ ಮಾರ್ಟಿನ್ ಗಪ್ಟಿಲ್ ಅವರ ದಾಖಲೆ ಹಿಂದಿಕ್ಕಿದರು. ಗಪ್ಟಿಲ್ 172 ಸಿಕ್ಸರ್ ಗಳಿಸಿದ್ದರೆ, ರೋಹಿತ್ ಈಗ 176 ಸಿಕ್ಸರ್ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 124, ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ 120 ಮತ್ತು ಆಸ್ಟ್ರೇಲಿಯದ ನಾಯಕ ಆರನ್ ಫಿಂಚ್ 119 ಸಿಕ್ಸರ್ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.