ಸೌತಾಂಪ್ಟನ್ (ಯುನೈಟೆಡ್ ಕಿಂಗಡಮ್): ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ 13 ಜಯ ದಾಖಲಿಸಿದ ಮೊದಲ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಇಲ್ಲಿ ಗುರುವಾರ ಇಂಗ್ಲೆಂಡ್ ವಿರುದ್ಧ ನಡೆದ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ರೋಹಿತ್ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಇದಾಗಿತ್ತು.
ವಿರಾಟ್ ಕೊಹ್ಲಿ ಅವರಿಂದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ನಂತರ ರೋಹಿತ್ ಶರ್ಮಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಈಗ ಇಂಗ್ಲೆಂಡ್ ತಂಡಗಳ ವಿರುದ್ಧ ತಂಡವನ್ನು ಜಯದ ದಡ ಮುಟ್ಟಿಸಿದ್ದಾರೆ.
ಈ ಮುನ್ನ, ಕೋವಿಡ್ ಸೋಂಕು ತಗುಲಿದ ಕಾರಣದಿಂದ ರೋಹಿತ್ ಶರ್ಮಾ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ನಲ್ಲಿ ಆಡುವುದರಿಂದ ವಂಚಿತರಾಗಿದ್ದರು. ಇಂದು ಗೆಲುವು ಪಡೆದ ಪಂದ್ಯದತ್ತ ನೋಡುವುದಾದರೆ, ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡ್ ಆಟದಿಂದ ಭಾರತವು ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಕ್ರಮವಾಗಿ 24, 39 ಮತ್ತು 33 ರನ್ ಗಳಿಸಿದರು.