ಹೈದರಾಬಾದ್:ದಿಢೀರ್ ಬೆಳವಣಿಗೆವೊಂದರಲ್ಲಿ ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ನಾಯತ್ವ ತೊರೆದಿದ್ದು, ಇದರಿಂದ ಇಡೀ ಕ್ರೀಡಾ ಜಗತ್ತು ಆಶ್ಚರ್ಯಕ್ಕೊಳಗಾಗಿದೆ. ರನ್ ಮಷಿನ್ ದಿಢೀರ್ ನಿರ್ಧಾರದಿಂದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಶಾಕ್ಗೊಳಗಾಗಿದ್ದಾರೆ.
2017 ರಿಂದ 2021ರವರೆಗೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ರವಿಶಾಸ್ತ್ರಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಏರಿಳಿತಗಳಲ್ಲಿ ಭಾಗಿಯಾಗಿದ್ದಾರೆ. ಆದರೆ, ಇದೀಗ ಅವರು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ವಿರಾಟ್, ನೀವೂ ತಲೆ ಎತ್ತಿ ನಡೆಯಬಹುದು. ನಾಯಕನಾಗಿ ನೀವೂ ಮಾಡಿರುವ ಸಾಧನೆಯನ್ನ ಕೆಲವರು ಮಾತ್ರ ಮಾಡಿದ್ದಾರೆ. ಟೀಂ ಇಂಡಿಯಾದ ಅತ್ಯಂತ ಆಕ್ರಮಣಕಾರಿ ಮತ್ತು ಯಶಸ್ವಿ ನಾಯಕರಲ್ಲಿ ನೀವೂ ಒಬ್ಬರು. ವೈಯಕ್ತಿಕವಾಗಿ ನನಗೆ ಇದು ದುಃಖದ ದಿನ. ಏಕೆಂದರೆ, ಇದು ನಾವು ಒಟ್ಟಾಗಿ ಕಟ್ಟಿರುವ ತಂಡವಾಗಿದೆ ಎಂದಿದ್ದಾರೆ.
ವಿಶ್ವದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಕಳೆದ 7 ವರ್ಷಗಳಿಂದ ತಂಡವನ್ನ ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದು, ನಂಬರ್ 1 ತಂಡವನ್ನಾಗಿ ರೂಪಗೊಳಿಸಿದ್ದಾರೆ. ನಾಯಕ ಸ್ಥಾನ ಕೊನೆಗೊಳಿಸಿರುವುದಕ್ಕಾಗಿ ನನಗೆ ವೈಯಕ್ತಿಕವಾಗಿ ದುಃಖವಾಗಿದೆ ಎಂದು ಭಾವುಕರಾಗಿದ್ದಾರೆ.
2014-15ರಲ್ಲಿ ಧೋನಿ ಕೂಡ ಹಠಾತ್ ಆಗಿ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ರವಿಶಾಸ್ತ್ರಿ ಭಾರತ ತಂಡದ ಮ್ಯಾನೇಜರ್ ಆಗಿದ್ದರು.
2015ರ ವಿಶ್ವಕಪ್ ನಂತರ ರವಿಶಾಸ್ತ್ರಿ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ 2017ರವರೆಗೆ ಅನಿಲ್ ಕುಂಬ್ಳೆ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದರು.