ಬೆಂಗಳೂರು:ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಮಧ್ಯಪ್ರದೇಶ ಆಟಗಾರರು ಭರ್ಜರಿ ಬ್ಯಾಟ್ ಬೀಸುತ್ತಿದ್ದಾರೆ. ಪಂದ್ಯದ ಮೂರನೇ ದಿನವಾದ ಇಂದು ಶುಭಂ ಶರ್ಮಾ ಹಾಗೂ ಯಶ್ ದುಬೆ ಶತಕ ಸಿಡಿಸಿ ಸಂಭ್ರಮಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಮಧ್ಯೆ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಮುಂಬೈ ಗಳಿಸಿದ್ದ 374 ರನ್ಗಳಿಗೆ ಪ್ರತಿಯಾಗಿ ಎಂಪಿ ಆಟಗಾರರು ಮಧ್ಯಾಹ್ನ 3.30ರ ವೇಳೆಗೆ ಕೇವಲ ಎರಡು ವಿಕೆಟ್ ನಷ್ಟಕ್ಕೆ 335 ರನ್‌ಗಳನ್ನು ಕಲೆ ಹಾಕಿ ಬಲಾಢ್ಯರಿಗೆ ತಕ್ಕ ತಿರುಗೇಟು ನೀಡುತ್ತಿದ್ದಾರೆ.
ನಿನ್ನೆಯಿಂದಲೂ ಮಧ್ಯಪ್ರದೇಶ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದ ಹಿಮಾಂಶು ಮಂತ್ರಿ 31 ರನ್ ಗಳಿಸಿ ಔಟ್ ಆಗಿದ್ದರು. ನಂತರ ಯಶ್ ದುಬೆ ಜೊತೆಯಾಗಿದ್ದ ಶುಭಂ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿ ರನ್ ಸೂರೆಗೈದರು. ಮಧ್ಯಾಹ್ನದ ಊಟದ ವಿರಾಮದ ವೇಳೆಗೆ ದುಬೆ ಶತಕ ಬಾರಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಶುಭಂ ಶರ್ಮಾ ಕೂಡಾ ಸೆಂಚುರಿ ಸಿಡಿಸಿದರು. ಈ ಮೂಲಕ ಇಬ್ಬರು ಆಟಗಾರರು ದ್ವಿಶತಕದ ಜೊತೆಯಾಟವನ್ನೂ ನೀಡಿದರು.
ಆದರೆ, ಈ ನಡುವೆ 116 ರನ್ ಗಳಿಸಿದ್ದ ಶುಭಂ ಶರ್ಮಾ ಅವರು ಮೋಹಿತ್ ಅವಸ್ತಿ ಬೌಲಿಂಗ್ನಲ್ಲಿ ಹಾರ್ದಿಕ್ ತಮೋರಿ ಕೈಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಒಟ್ಟಾರೆ 215 ಎಸೆತಗಳನ್ನು ಎದುರಿಸಿದ ಶುಭಂ ಶರ್ಮಾ 15 ಬೌಂಡರಿ ಹಾಗೂ ಒಂದು ಸಿಕ್ಸರ್ನೊಂದಿಗೆ 116 ಬಾರಿಸಿದ್ದರು. ಶುಭಂ ಔಟಾದ ನಂತರ ಕ್ರೀಸ್ಗೆ ಬಂದ ರಜತ್ ಪಾಟಿದಾರ್ ಕೂಡ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. 61 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 51 ರನ್ ಸಿಡಿಸಿ ಆಟ ಮುಂದುವರೆಸಿದ್ದಾರೆ. ಯಶ್ ದುಬೆ ಸಹ 129 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಮುಂಬೈ ಪರ ತುಷಾರ್ ದೇಶಪಾಂಡೆ ಹಾಗೂ ಮೋಹಿತ್ ಅವಸ್ತಿ ತಲಾ 1 ವಿಕೆಟ್ ಪಡೆದಿದ್ದಾರೆ. ಮೊದಲ ದಿನದಾಟದಲ್ಲಿ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದ್ದ ಮುಂಬೈ 2ನೇ ದಿನದಾಟ ಆರಂಭಿಸಿ ಬೃಹತ್ ಮೊತ್ತ ಗಳಿಸುವ ಇರಾದೆಯಲ್ಲಿತ್ತು. ಆದರೆ, ಇದಕ್ಕೆ ಮಧ್ಯಪ್ರದೇಶ ಬೌಲರ್ಗಳು ಕಡಿವಾಣ ಹಾಕಿದ್ದರಿಂದ ಮುಂಬೈ 374 ರನ್ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು.
ನಂತರ ತನ್ನ ಇನ್ನಿಂಗ್ಸ್ ಆರಂಭಿಸಿದ್ದ ಮಧ್ಯಪ್ರದೇಶ ಎರಡನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 123 ರನ್‌ಗಳನ್ನು ಗಳಿಸಿ ಸುಸ್ಥಿತಿಯಲ್ಲಿತ್ತು. ಮೂರನೇ ದಿನದಾಟದಲ್ಲೂ ಮಧ್ಯಪ್ರದೇಶ ಆಟಗಾರರು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾ ಪ್ರವಾಸದ ಮೊದಲ ಟಿ-20 ಪಂದ್ಯದಲ್ಲಿ ಗೆದ್ದ ಭಾರತದ ವನಿತೆಯರು