ನವದೆಹಲಿ: ಐಸಿಸಿ ಟಿ-20 ವಿಶ್ವಕಪ್ ದೃಷ್ಟಿಯಿಂದ ಕೆಲ ಪ್ಲೇಯರ್ಸ್ಗಳಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮಹತ್ವ ಪಡೆದುಕೊಂಡಿದೆ. ಅದರಲ್ಲಿ ಪ್ರಮುಖವಾಗಿ ತಂಡಕ್ಕೆ ಕಮ್ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರು ನೀಡುವ ಪ್ರದರ್ಶನದ ಮೇಲೆ ಮುಂದಿನ ಹಾದಿ ನಿರ್ಧಾರವಾಗಲಿದೆ.
ನಾಳೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಭಾಗಿಯಾಗಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಿಶ್ವಕಪ್ನಲ್ಲಿ ಫಿನಿಶರ್ ಪಾತ್ರ ನಿರ್ವಹಿಸಲು ಈ ಇಬ್ಬರೂ ಪ್ಲೇಯರ್ಗಳ ಮೇಲೆ ಬಿಸಿಸಿಐ ದೃಷ್ಟಿ ನೆಟ್ಟಿದೆ.
2019ರ ಫೆಬ್ರವರಿಯಿಂದಲೂ ಟೀಂ ಇಂಡಿಯಾ ಪರ ಕಾರ್ತಿಕ್ ಯಾವುದೇ ಟಿ-20 ಪಂದ್ಯ ಆಡಿಲ್ಲ. ಆದರೆ, 2022ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಫಿನಿಶರ್ ಪಾತ್ರ ನಿರ್ವಹಿಸಿರುವ ಕಾರ್ತಿಕ್ 220ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಹೀಗಾಗಿ, ಬರೋಬ್ಬರಿ ಮೂರು ವರ್ಷಗಳ ಬಳಿಕ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇವರ ಬಗ್ಗೆ ಕೂಡ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆ ಮಾತುಗಳನ್ನಾಡಿದ್ದು, ದಿನೇಶ್ ಕಾರ್ತಿಕ್ ತಂಡದಲ್ಲಿ ಫಿನಿಶರ್ ಪಾತ್ರ ನಿರ್ವಹಿಸುವ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ:ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ.. ಈ ಸಾಧನೆ ಮಾಡಿದ ಮೊದಲ ಭಾರತೀಯ!
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟನ್ಸ್ ಮುನ್ನಡೆಸಿ ಯಶಸ್ವಿಯಾಗಿರುವ ಹಾರ್ದಿಕ್ ಪಾಂಡ್ಯ, ಅನೇಕ ಏಳು - ಬೀಳಿನ ಬಳಿಕ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 2021ರ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಪಾಂಡ್ಯ, ಐಪಿಎಲ್ನಲ್ಲಿ 15 ಪಂದ್ಯಗಳಿಂದ 487ರನ್ಗಳಿಸಿದ್ದು, 8 ವಿಕೆಟ್ ಸಹ ಪಡೆದುಕೊಂಡಿದ್ದಾರೆ. ಇದರ ಪ್ರದರ್ಶನಕ್ಕೆ ಫಿದಾ ಆಗಿರುವ ಬಿಸಿಸಿಐ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವಕಾಶ ನೀಡಿದೆ.
ಉಳಿದಂತೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್ , ಅಕ್ಸರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಸಹ ರೇಸ್ನಲ್ಲಿದ್ದು, ಐಪಿಎಲ್ನಲ್ಲಿ ಹೆಚ್ಚಿನ ವಿಕೆಟ್ ಪಡೆದಿರುವ ಯಜುವೇಂದ್ರ ಚಹಲ್ ಕೂಡ ಉತ್ತಮ ಪ್ರದರ್ಶನ ನೀಡಿ, ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದಾರೆ.
ಮೊದಲ ಟಿ20 ಪಂದ್ಯ ನಾಳೆ ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದ್ದು, ತದನಂತರ ಕ್ರಮವಾಗಿ ಜೂನ್ 12ರಂದು ಕಟಕ್, ಜೂನ್ 14 ವಿಶಾಖಪಟ್ಟಣಂ, ಜೂನ್ 17 ರಾಜ್ಕೋಟ್ ಹಾಗೂ ಜೂನ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಎರಡು ತಿಂಗಳ ಕಾಲ ಸುದೀರ್ಘ ಐಪಿಎಲ್ನಲ್ಲಿ ಭಾಗಿಯಾಗಿರುವ ಕಾರಣ ಟೀಂ ಇಂಡಿಯಾ ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಹಿರಿಯರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ, ತಂಡವನ್ನ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.