ನವದೆಹಲಿ:ತಮ್ಮ ವಿಶಿಷ್ಠ ನಾಯಕತ್ವ ಮತ್ತು ದಿಟ್ಟ ಬ್ಯಾಟಿಂಗ್ ಶೈಲಿಯ ಮೂಲಕ ಭಾರತೀಯ ಕ್ರಿಕೆಟ್ ಅನ್ನು ಮರುರೂಪಿಸಿದ ಮಹೇಂದ್ರ ಸಿಂಗ್ ಧೋನಿ ಇಂದಿಗೆ ಸರಿಯಾಗಿ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಭಾರತ ಕ್ರಿಕೆಟ್ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ಲೋಕಕ್ಕೂ ಇದೊಂದು ಅಚ್ಚರಿಯ ಸುದ್ದಿಯಾಗಿತ್ತು. 15 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ನಾಯಕನಾಗಿ ಭಾರತಕ್ಕೆ ಮೂರು ಐಸಿಸಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟವರು ಮಾಹಿ.
ಧೋನಿ ಎಷ್ಟು ಸರಳವಾಗಿ ನಿವೃತ್ತಿ ಹೇಳಿದ್ದರೆಂದರೆ, 2020 ಆಗಸ್ಟ್ 15ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ಆಡಿದ ಪಂದ್ಯಗಳ ಪುಟ್ಟ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ ಹಿನ್ನೆಲೆಯಲ್ಲಿ ಅಮಿತಾಭ್ ಬಚ್ಚನ್ ಅವರ 'ಕಭಿ ಕಭಿ' ಚಿತ್ರದ 'ಮೈ ಪಲ್ ದೋ ಪಲ್ ಕಾ ಶಾಯರ್ ಹೂ' ಎಂಬ ಹಾಡು ಬಳಸಿದ್ದರು. ಈ ಪೋಸ್ಟ್ನಲ್ಲಿ, "ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. 1929 ಗಂಟೆಗಳಿಂದ ನನ್ನನ್ನು ನಿವೃತ್ತಿ ಎಂದು ಪರಿಗಣಿಸಿ" ಎಂದು ವಿಶೇಷ ರೀತಿಯಲ್ಲಿ ಕ್ಯಾಪ್ಶನ್ ಕೊಟ್ಟಿದ್ದರು.
ಮಾಹಿ ಮೈದಾನದಲ್ಲಿ ಯಾವಾಗಲೂ ವಿಶೇಷವಾಗಿಯೇ ಕಾಣುತ್ತಿದ್ದರು. ಇದಕ್ಕೆ ಕಾರಣ 2007ರ ವಿಶ್ವಕಪ್. ಮೊದಲ ಟಿ20 ವಿಶ್ವಕಪ್ನ ಕೊನೇಯ ಓವರ್ ಮತ್ತು ಕೊನೇಯ ಎಸೆತವನ್ನು ಕ್ರಿಕೆಟ್‌ಪ್ರೇಮಿಗಳು ಎಂದೂ ಮರೆಯಲಾರರು. ಅಂತಹ ಫೀಲ್ಡ್ ಅನ್ನು ಧೋನಿ ಮೈದಾನದಲ್ಲಿ ಸೆಟ್ ಮಾಡಿದ್ದರು. ಇದಾದ ನಂತರ ಮಾಹಿಯ ಜಾದು ಮೈದಾನದಲ್ಲಿ ಒಂದರ ಮೇಲೊಂದರಂತೆ ಕಾಣಸಿಕ್ಕಿತ್ತು. ಧೋನಿ ಮೈದಾನದಲ್ಲಿ ತೆಗೆದುಕೊಂಡ ಪ್ರತಿ ನಿರ್ಧಾರದಲ್ಲೂ ಹೊಸತನವಿರುತ್ತಿತ್ತು. 2007ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯ ಟೈ ಆದಾಗ ಆಡಿಸಿದ್ದ ಹಿಟ್ ವಿಕೆಟ್ನಲ್ಲೂ ಧೋನಿ ತಮ್ಮ ಚಾಣಾಕ್ಷತನ ಮೆರೆದಿದ್ದರು. ಇವರದೇ ನಾಯಕತ್ವದಲ್ಲಿ ತಂಡ 2011ರಲ್ಲಿ ವಿಶ್ವಕಪ್ ಗೆದ್ದುಕೊಂಡಿದೆ. ಈ ವಿಶ್ವಕಪ್ನಲ್ಲಿ ಧೋನಿಯ ಫಿನಿಶಿಂಗ್ ಶಾಟ್ ಸ್ಮರಣೀಯ.