ಏಕದಿನ ಕ್ರಿಕೆಟ್ ವಿಶ್ವಕಪ್ನ ಕರಡು ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಡುವ ಎಲ್ಲ ದೇಶಗಳಿಗೂ ಕಳುಹಿಸಿ ಕೊಟ್ಟಿದ್ದು, ಆಕ್ಷೇಪಗಳಿದ್ದಲ್ಲಿ ತಿಳಿಸುವಂತೆ ತಿಳಿಸಿದೆ. ಇದಕ್ಕೆ ಪಾಕಿಸ್ತಾನ ಕೊಟ್ಟ ಕಾರಣ "ಕುಣಿಯಲಾರದವರಿಗೆ ನೆಲ ಡೋಂಕು" ಎಂಬ ಗಾದೆಯಂತಿದೆ. 2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕೆಲವು ತಂಡಗಳ ವಿರುದ್ಧ ಆಡುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಕರಾರು ತೆಗೆದಿದೆ.
ಅಫ್ಘಾನಿಸ್ತಾನ ತಂಡದ ವಿರುದ್ಧ ಚೆನ್ನೈನಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಆಡಲು ಪಾಕಿಸ್ತಾನ ಆಕ್ಷೇಪಿಸಿದೆ. ಈಗಾಗಲೇ ಏಷ್ಯಾಕಪ್‌ನ ಹಿಡಿತದ ಬಿಕ್ಕಟ್ಟು ಕೊನೆಗೊಂಡಿದ್ದು, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.
ಭಾರತ- ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸುವ ಮೊದಲು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪಿಸಿಬಿ ಸೇರಿದಂತೆ ಎಲ್ಲ ಸದಸ್ಯ ಮಂಡಳಿಗಳಿಂದ ಪ್ರಸ್ತಾವಿತ ವೇಳಾಪಟ್ಟಿಗೆ ಸಲಹೆಗಳನ್ನು ಕೇಳಿದೆ.
ಪಾಕಿಸ್ತಾನಕ್ಕೆ ಸ್ಪಿನ್ನರ್‌ಗಳ ಭಯವಂತೆ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕರಡು ವೇಳಾಪಟ್ಟಿಯನ್ನು ಐಸಿಸಿಗೆ ನೀಡಿದೆ. ಐಸಿಸಿ ಆಯಾ ದೇಶಗಳಿಗೆ ಪಟ್ಟಿಯನ್ನು ಕಳುಹಿಸಿಕೊಟ್ಟಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕರಡು ಪ್ರತಿಯಲ್ಲಿ ತಿಳಿಸಲಾದ ಎರಡು ಕ್ರೀಡಾಂಗಣಗಳ ಬಗ್ಗೆ ಅಸಮಾಧಾನ ಹೊರಹಾಕಿದೆ.
ಅಫ್ಘಾನಿಸ್ತಾನವನ್ನು ಚೆನ್ನೈನಲ್ಲಿ ಮತ್ತು ಆಸ್ಟ್ರೇಲಿಯಾವನ್ನು ಬೆಂಗಳೂರಿನಲ್ಲಿ ಆಡುವುದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಚೆನ್ನೈನ ಸ್ಪಿನ್‌ಸ್ನೇಹಿ ಪಿಚ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಡುವುದು ಎಂದರೆ ಪಾಕಿಸ್ತಾನವು ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರಂತಹ ಸ್ಪಿನ್ನರ್‌ಗಳನ್ನು ಎದುರಿಸಬೇಕಾಗುತ್ತದೆ ಎಂದಿದೆ. ಪಂದ್ಯಕ್ಕೂ ಮುನ್ನ ಸೋಲಿನ ಲೆಕ್ಕಾಚಾರ ಹಾಕುವ ಮೂಲಕ ಪಾಕಿಸ್ತಾನ ಹಾಸ್ಯಾಸ್ಪದ ರೀತಿಯಲ್ಲಿ ಕಾರಣ ಹೇಳಿದೆ.
ಬೆಂಗಳೂರಿನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಸ್ನೇಹಿಯಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲು ಪಾಕಿಸ್ತಾನಕ್ಕೆ ಏಕೆ ಆಕ್ಷೇಪಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. 'ಪಾಕಿಸ್ತಾನದ ಪಂದ್ಯಗಳನ್ನು ಮರು ನಿಗದಿಪಡಿಸಲು ಮತ್ತು ತಂಡದ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಆಡಲು ಐಸಿಸಿ / ಬಿಸಿಸಿಐಗೆ ಕೇಳುವುದು ಮಂಡಳಿಯ ಸಲಹೆಯಾಗಿದೆ' ಎಂದು ಮೂಲಗಳು ಹೇಳಿವೆ. ವೇಳಾಪಟ್ಟಿಯಲ್ಲಿ ಸದಸ್ಯರಿಂದ ಸಲಹೆಗಳನ್ನು ಪಡೆಯುವುದು ಐಸಿಸಿಯ ನಿಯಮ, ಸ್ಥಳ ಬದಲಾವಣೆಗೆ ಅವಕಾಶ ಇದೆ ಆದರೆ ಬಲವಾದ ಕಾರಣವಿರಬೇಕು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
"2016ರಲ್ಲಿ ಪಾಕಿಸ್ತಾನವು ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಿದಾಗ ಮಾಡಿದಂತಹ ಸುರಕ್ಷತಾ ಕಾರಣಗಳಿಂದಾಗಿ ಧರ್ಮಶಾಲಾದಿಂದ ಕೋಲ್ಕತ್ತಾಗೆ ಪಂದ್ಯವನ್ನು ಸ್ಥಳಾಂತರಿಸಲಾಗಿತ್ತು. ಮೈದಾನದಲ್ಲಿ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಪ್ರಕಾರ ನೀವು ಸ್ಥಳಗಳನ್ನು ಆಯ್ಕೆ ಮಾಡಲು ಹೊರಟರೆ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ತುಂಬಾ ಕಠಿಣವಾಗುತ್ತದೆ. ಸ್ಥಳಗಳಿಗೆ ಸಂಬಂಧಿಸಿದಂತೆ ಬಲವಾದ ಕಾರಣವಿಲ್ಲದಿದ್ದರೆ ಮಾತ್ರ ಬದಲಾವಣೆಗಳನ್ನು ಮಾಡಲಾಗುವುದು" ಎಂದು ಬಿಸಿಸಿಯ ಮೂಲಗಳು ತಿಳಿಸಿವೆ.
ಅಹಮದಾಬಾದ್‌ನಲ್ಲಿ ಭಾರತ ವಿರುದ್ಧ ವಿಶ್ವಕಪ್ ಪಂದ್ಯವನ್ನು ಆಡಲು ಪಾಕಿಸ್ತಾನ ಒಪ್ಪಿಕೊಂಡಿರುವ ಬಗ್ಗೆ ಕೇಳಿದಾಗ, ಪಿಸಿಬಿ ಮೂಲವು ಬಹುತೇಕ ಒಪ್ಪಿಗೆ ನೀಡಿದ್ದು, ಆದರೆ ಈ ಬಗ್ಗೆ ಇನ್ನು ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ತನ್ನ ಎರಡು ಆರಂಭಿಕ ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ಅಕ್ಟೋಬರ್ 6 ಮತ್ತು 12 ರಂದು ಆಡಬೇಕಿದೆ. ಇದಲ್ಲದೇ ಪಾಕಿಸ್ತಾನ ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ:Virat Kohli: ಸಾವಿರ ಕೋಟಿಗೆ ಒಡೆಯ ವಿರಾಟ್.. ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಸಿಗುವ ಹಣವೆಷ್ಟು ಗೊತ್ತಾ?