ಮೊಹಾಲಿ: ರವೀಂದ್ರ ಜಡೇಜಾ ಅವರ ಅಜೇಯ ಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 574 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿದೆ.
ಶುಕ್ರವಾರ 6 ವಿಕೆಟ್ ಕಳೆದುಕೊಂಡು 357 ರನ್ಗಳಿಸಿದ್ದ ಭಾರತ 2ನೇ ದಿನ ಜಡೇಜಾ ಶತಕ ಮತ್ತು ಅಶ್ವಿನ್ ಅರ್ಧಶತಕದ ನೆರವಿನಿಂದ 574 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 228 ಎಸೆತಗಳನ್ನೆದುರಿಸಿದ ಜಡೇಜಾ 17 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 175 ರನ್ಗಳಿಸಿದರು. ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ್ದ ಜಡೇಜಾ ಈ ಶತಕದ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ನಿನ್ನೆ ಜಡೇಜಾ ಜೊತೆಗೆ ಅಜೇಯರಾಗುಳಿದಿದ್ದ ರವಿಚಂದ್ರನ್ ಅಶ್ವಿನ್ 7ನೇ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಲು ನೆರವಾಗಿದ್ದರು. ಈ ಸ್ಪಿನ್ ಜೋಡಿ ಶ್ರೀಲಂಕಾ ಬೌಲರ್ಗಳನ್ನು 20 ಕ್ಕೂ ಹೆಚ್ಚು ಓವರ್ಗಳ ಕಾಲ ಕಾಡಿದರು. ಅಶ್ವಿನ್ 82 ಎಸೆತಗಳಲ್ಲಿ 8 ಬೌಂಡರಿ ಸಹಿತ 61 ರನ್ಗಳಿಸಿ ಔಟಾದರು.
ಅಶ್ವಿನ್ ಔಟಾಗುತ್ತಿದ್ದಂತೆ ಜಡೇಜಾ ಸ್ಫೋಟಕ ಬ್ಯಾಟಿಂಗ್ಗೆ ಮೊರೆ ಹೋದರು. 9ನೇ ವಿಕೆಟ್ಗೆ ಶಮಿ ಜೊತೆ(34 ಎಸೆತಗಳಲ್ಲಿ ಅಜೇಯ 20) 103 ರನ್ಗಳ ಜೊತೆಯಾಟ ನಡೆಸಿದರು. ದ್ವಿಶತಕಕ್ಕೆ 25 ರನ್ಗಳ ಅಗತ್ಯವಿದ್ದ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದರು.