ಹೈದರಾಬಾದ್ (ತೆಲಂಗಾಣ):ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಂಗಳವಾರ ಐಪಿಎಲ್ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದರು. ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಆಟಗಾರ ಇಂಡಿಯನ್ಸ್ ಪ್ರೀಮಿಯರ್ ಲೀಗ್ನಲ್ಲಿ 6 ಸಾವಿರ ರನ್ ಗಡಿ ದಾಟಿದರು. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು.
ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದರು. ಪಂದ್ಯದಲ್ಲಿ 14 ರನ್ ಗಳಿಸಿದ್ದಾಗ ಹಿಟ್ಮ್ಯಾನ್ 6 ಸಾವಿರ ರನ್ ಗಡಿ ಮುಟ್ಟಿದರು. 18 ಎಸೆತಗಳಲ್ಲಿ 28 ರನ್ ಮಾಡಿ ಔಟಾದರು. ಇದರಿಂದ 6014 ರನ್ ದಾಖಲಿಸಿದರು. ರೋಹಿತ್ ಶರ್ಮಾ ಐಪಿಎಲ್ನಲ್ಲಿ 232 ಪಂದ್ಯಗಳನ್ನಾಡಿದ್ದಾರೆ.
ರೋಹಿತ್ ಶರ್ಮಾಗೂ ಮೊದಲು ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(6844) ಪಂಜಾಬ್ ನಾಯಕ ಶಿಖರ್ ಧವನ್(6477), ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಡೇವಿಡ್ ವಾರ್ನರ್(6109) ಆರು ಸಾವಿರ ರನ್ ಗಳಿಸಿದ ಅಗ್ರ ಮೂವರು ಆಟಗಾರರಾಗಿದ್ದಾರೆ.
ಬಲಗೈ ಬ್ಯಾಟರ್ ಶರ್ಮಾ ಈವರೆಗಿನ 16 ಆವೃತ್ತಿಯ ಐಪಿಎಲ್ನಲ್ಲಿ 2 ಫ್ರಾಂಚೈಸಿ ಪರ ಬ್ಯಾಟ್ ಬೀಸಿದ್ದಾರೆ. 2008 ರಿಂದ 2010 ರವರೆಗೆ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ್ದರು. 2009 ರಲ್ಲಿ ತಂಡ ಚಾಂಪಿಯನ್ ಆಗಿತ್ತು. ಈ ವೇಳೆ ಯುವ ಆಟಗಾರನಾಗಿದ್ದ ಶರ್ಮಾ ತಂಡದಲ್ಲಿದ್ದರು. ಬಳಿಕ 2011 ರಲ್ಲಿ ಮುಂಬೈ ಇಂಡಿಯನ್ಸ್ಗೆ ಸೇರಿಕೊಂಡರು. 2013 ರ ಆವೃತ್ತಿಯ ಮಧ್ಯದಲ್ಲಿ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ನಾಯಕತ್ವ ಬಿಟ್ಟಾಗ ಮುಂಬೈ ಇಂಡಿಯನ್ಸ್ ಸಾರಥ್ಯ ವಹಿಸಿಕೊಂಡಿದ್ದಾರೆ.