ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಸತತ 13 ಸೀಸನ್ಗಳಲ್ಲಿ 300+ ರನ್ಗಳಿಸಿದ್ದು, ಈ ಸಾಧನೆ ಮಾಡಿರುವ ಏಕೈಕ ಆಟಗಾರನೆಂಬ ಸಾಧನೆಗೆ ಪಾತ್ರರಾಗಿದ್ದಾರೆ. ನಿನ್ನೆ ವಾಂಖೆಡೆ ಮೈದಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ 73ರನ್ಗಳಿಕೆ ಮಾಡುವ ಮೂಲಕ ವಿರಾಟ್ ಈ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಕಳಪೆ ಬ್ಯಾಟಿಂಗ್ನಿಂದ ಹೊರಬಂದು ಅದ್ಭುತ ಫಾರ್ಮ್ ಕಂಡುಕೊಂಡಿದ್ದಾರೆ.
ಪ್ಲೇ-ಆಫ್ ರೇಸ್ ಜೀವಂತವಾಗಿಟ್ಟುಕೊಳ್ಳಲು 'ಮಾಡು ಇಲ್ಲವೇ ಮಡಿ' ಆಗಿದ್ದ ಪಂದ್ಯದಲ್ಲಿ ಆರ್ಸಿಬಿ 8 ವಿಕೆಟ್ಗಳ ಜಯ ದಾಖಲು ಮಾಡಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ತಾವು ಎದುರಿಸಿದ 54 ಎಸೆತಗಳಲ್ಲಿ 73ರನ್ಗಳಿಕೆ ಮಾಡಿದರು. 2010ರಿಂದಲೂ ಪ್ರತಿವೊಂದು ಸೀಸನ್ನಲ್ಲಿ ವಿರಾಟ್ 300+ ರನ್ಗಳಿಕೆ ಮಾಡಿದ್ದಾರೆ. 2010ರಲ್ಲಿ 16 ಪಂದ್ಯಗಳಿಂದ 307ರನ್ಗಳಿಸಿದ್ದ ವಿರಾಟ್ ಕೇವಲ ಒಂದು ಅರ್ಧಶತಕ ಸಿಡಿಸಿದ್ದರು.
ಇದನ್ನೂ ಓದಿ:ತಪ್ಪು ತೀರ್ಪಿಗೆ ಮ್ಯಾಥ್ಯೂ ವೇಡ್ ಕೋಪತಾಪ: ಗುಜರಾತ್ ಆಟಗಾರನ ವರ್ತನೆ ಖಂಡಿಸಿದ ಮ್ಯಾಚ್ ರೆಫ್ರಿ
2011ರಲ್ಲಿ ಕೊಹ್ಲಿ 16 ಪಂದ್ಯಗಳಿಂದ 557ರನ್, 2012ರಲ್ಲಿ 16 ಪಂದ್ಯಗಳಿಂದ 364ರನ್, 2013ರಲ್ಲಿ 634ರನ್, 2014ರಲ್ಲಿ 359ರನ್, 2015ರಲ್ಲಿ 505ರನ್, 2016ರಲ್ಲಿ 973 ರನ್, 2017ರಲ್ಲಿ 308ರನ್, 2018ರಲ್ಲಿ 530 ರನ್, 2019ರಲ್ಲಿ 464 ರನ್, 2020ರಲ್ಲಿ 466 ರನ್, 2021ರಲ್ಲಿ 405ರನ್ಗಳಿಸಿದ್ದ ವಿರಾಟ್, 2022ರಲ್ಲಿ ತಾವು ಆಡಿರುವ 14 ಪಂದ್ಯಗಳಿಂದ 309 ರನ್ಗಳಿಕೆ ಮಾಡಿದ್ದಾರೆ.
ಈ ಸಲದ ಟೂರ್ನಿಯಲ್ಲಿ ಬರೋಬ್ಬರಿ ಮೂರು ಸಲ ಗೋಲ್ಡನ್ ಡಕ್ ಆಗಿದ್ದ ವಿರಾಟ್, ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರು. ಆದರೆ, ಇದೀಗ ಅದ್ಭುತ ಫಾರ್ಮ್ಗೆ ಮರಳಿದ್ದು, ಅದಕ್ಕೆ ನಿನ್ನೆಯ ಪಂದ್ಯ ಸಾಕ್ಷಿಯಾಗಿದೆ. ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಆಡಿರುವ 221 ಪಂದ್ಯಗಳಿಂದ 6,592ರನ್ಗಳಿಕೆ ಮಾಡಿದ್ದು, ಇದರಲ್ಲಿ ಐದು ಶತಕ ಹಾಗೂ 44 ಅರ್ಧಶತಕ ಸೇರಿಕೊಂಡಿವೆ. ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 113 ಆಗಿದೆ.