ಅಹಮದಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೊಣಕಾಲು ಗಾಯಕ್ಕೆ ತುತ್ತಾದ ಬ್ಯಾಟರ್ ಕೇನ್ ವಿಲಿಯಮ್ಸನ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ಫ್ರಾಂಚೈಸಿ ಭಾನುವಾರ ತಿಳಿಸಿದೆ.
"ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದ ವೇಳೆ ಕ್ಯಾಚ್‌ಗೆ ಪ್ರಯತ್ನಿಸುತ್ತಿದ್ದಾಗ ಗಾಯಗೊಂಡಿದ್ದ ವಿಲಿಯಮ್ಸನ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಕೇನ್ ಅವರನ್ನು ತಂಡ ಮಿಸ್ ಮಾಡಿಕೊಳ್ಳಲಿದೆ. ಇದು ದುಃಖಕರ ಸಂಗತಿಯೂ ಹೌದು. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಶೀಘ್ರದಲ್ಲೇ ಮತ್ತೆ ಮೈದಾನಕ್ಕೆ ಆಗಮಿಸಲಿ" ಎಂದು ಗುಜರಾತ್ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ತಿಳಿಸಿದ್ದಾರೆ.
ಮೊಣಕಾಲು ಗಾಯ ತೀವ್ರವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಅವರ ಬದಲಿಗೆ ಬದಲಿ ಆಟಗಾರನನ್ನು ಅಂತಿಮಗೊಳಿಸಬೇಕಿದೆ. ಈ ಕುರಿತು ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಾಗುವುದು ಎಂದು ತಂಡ ತಿಳಿಸಿದೆ.
ಪ್ರಸಕ್ತ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ವಿಲಿಯಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯಲ್ಲಿ ಜಿಗಿದು ಹಿಡಿಯುವಾಗ ಆಯತಪ್ಪಿ ಬಿದ್ದಿದ್ದರು. ಚೆಂಡು ಸಿಕ್ಸರ್ ಆಗುವುದನ್ನು ತಡೆದ ವಿಲಿಯಮ್ಸನ್ ನೆಲಕ್ಕೆ ಕಾಲನ್ನು ಬಲವಾಗಿ ಬಡಿಸಿಕೊಂಡು, ನೋವಿನಿಂದ ಒದ್ದಾಡಿದರು. ತಕ್ಷಣವೇ ಧಾವಿಸಿದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದರೂ, ನೋವು ಹೆಚ್ಚಾದ ಕಾರಣ 13 ನೇ ಓವರ್ನಲ್ಲಿ ಅವರು ಮೈದಾನದಿಂದ ಹೊರನಡೆದಿದ್ದರು.