ಕೋಲ್ಕತ್ತಾ :ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ನಿನ್ನೆಯ ಪಂದ್ಯದಲ್ಲಿ ಅತ್ಯಂತ ವೇಗದ ಅರ್ಧಶತಕ ಪೂರೈಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ದಾಖಲೆ ಬರೆದರು. ಜೈಸ್ವಾಲ್ ಅವರ ಬಿರುಸಿನ ಆಟದ ನೆರವಿನಿಂದ ಕೇವಲ 13.1 ಓವರ್ಗಳಲ್ಲೇ ರಾಯಲ್ಸ್ ಗೆಲುವಿನ ದಡ ಸೇರಿತು. ಅಂಕಪಟ್ಟಿಯಲ್ಲೂ ಮೂರನೇ ಸ್ಥಾನಕ್ಕೇರಿತು. ಡೇರಿಂಗ್ ಆ್ಯಂಡ್ ಡ್ಯಾಷಿಂಗ್ ಆಟಗಾರನ ಅಬ್ಬರದ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜರು ಬೆರಗಾಗಿದ್ದಾರೆ.
ವೀರೇಂದ್ರ ಸೆಹ್ವಾಗ್: ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್‌ನಲ್ಲಿ, "ಈ ಹುಡುಗ ವಿಶೇಷವಾಗಿದ್ದಾನೆ. ಸ್ಟ್ರೈಕಿಂಗ್ (ಬ್ಯಾಟಿಂಗ್) ಅನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾನೆ" ಎಂದು ಹೇಳಿದ್ದಾರೆ.
ಬ್ರೆಟ್ ಲೀ: ಮಾಜಿ ದಿಗ್ಗಜ ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಯುವ ಬ್ಯಾಟರ್ ಟ್ಯಾಗ್ ಮಾಡಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೈಸ್ವಾಲ್ರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಲಸಿತ್ ಮಾಲಿಂಗ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಲಸಿತ್ ಮಾಲಿಂಗ ಅವರು ಶೀಘ್ರದಲ್ಲೇ ಭಾರತದ ಪರ ಆಡಲಿರುವ ಯುವ ಬ್ಯಾಟರ್ ಅನ್ನು ನೋಡಲಿದ್ದೇವೆ ಎಂದು ಹಾರೈಸಿದ್ದಾರೆ. "ಯಶಸ್ವಿ ಜೈಸ್ವಾಲ್ ನನ್ನ ನೆಚ್ಚಿನ ಭಾರತೀಯ ಯುವ ಬ್ಯಾಟರ್. ಶೀಘ್ರದಲ್ಲೇ ನಿಮ್ಮನ್ನು ಬ್ಲೂ ಜೆರ್ಸಿಯಲ್ಲಿ ನೋಡಲು ಎದುರು ನೋಡುತ್ತಿದ್ದೇನೆ" ಎಂದು ಪೇಸ್ ಲೆಜೆಂಡ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.